ಮಡಿಕೇರಿ ಮಾ.23 : ಐದನೇ ತರಗತಿಗೆ ಮಾ.27 ರಿಂದ 30 ರವರೆಗೆ ಮತ್ತು 8 ನೇ ತರಗತಿಗೆ ಮಾ.27 ರಿಂದ ಏಪ್ರಿಲ್, 01 ರವರೆಗೆ ಮೌಲ್ಯಾಂಕನ ನಡೆಯಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ ಅವರು ತಿಳಿಸಿದ್ದಾರೆ.
5 ಮತ್ತು 8 ನೇ ತರಗತಿಯ ಮೌಲ್ಯಾಂಕನದಲ್ಲಿ ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದಿಲ್ಲ. ಎಲ್ಲಾ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆಗೊಳಿಸಲಾಗುವುದು ಎಂದು ಹೇಳಿದ್ದಾರೆ.
5 ಮತ್ತು 8 ನೇ ತರಗತಿಯ ಮೌಲ್ಯಾಂಕನವು ವಾರ್ಷಿಕ ಪರೀಕ್ಷೆಯಾಗಿರುವುದಿಲ್ಲ. ಇದು ಕೇವಲ ಮೌಲ್ಯಾಂಕನವಾಗಿದೆ. ಈ ಮೌಲ್ಯಾಂಕನದ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಕಲಿಕಾ ನ್ಯೂನ್ಯತೆ, ಕಲಿಕಾ ಪ್ರಗತಿ ತಿಳಿದುಕೊಂಡು ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಲಿಕಾ ಕೊರತೆಯನ್ನು ನೀಗಿಸಲು ಶೈಕ್ಷಣಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಪ್ರಮುಖ ಉದ್ದೇಶವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮೌಲ್ಯಾಂಕನದ ಫಲಿತಾಂಶವನ್ನು ಸಂಬಂಧಿಸಿದ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ತಿಳಿಸಲಾಗುವುದು. ಈ ಮೂಲಕ ಫಲಿತಾಂಶದ ಗೌಪ್ಯತೆಯನ್ನು ಕಾಪಾಡಲಾಗುವುದು. ಪಠ್ಯಪುಸ್ತಕವನ್ನಾಧರಿಸಿ ಮೌಲ್ಯಾಂಕನಕ್ಕೆ ಪ್ರಶ್ನೆ ಸಿದ್ದಪಡಿಸಲಾಗಿದೆ ಎಂದು ಸಮಗ್ರ ಶಿಕ್ಷಣ ಅಭಿಯಾನದ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಹಾಗೂ ಉಪ ನಿರ್ದೇಶಕರು ಹೇಳಿದ್ದಾರೆ.