ಮಡಿಕೇರಿ ಮಾ.23 : ಫಲಾನುಭವಿಗಳ ಸಮಾವೇಶದ ಹೆಸರಿನಲ್ಲಿ ಮುಖ್ಯಮಂತ್ರಿಗಳ ಕೊಡಗು ಜಿಲ್ಲಾ ಭೇಟಿ ನಿರಾಶಾದಾಯಕವಾಗಿತ್ತು ಮತ್ತು ಜನಸಾಮಾನ್ಯರ ಹಲವು ನಿರೀಕ್ಷೆಗಳನ್ನು ಹುಸಿ ಮಾಡಿದ ಭೇಟಿ ಇದಾಗಿತ್ತು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಹಾಗೂ ತಾ.ಪಂ ಮಾಜಿ ಸದಸ್ಯ ಕೆ.ಐ.ಮಹಮ್ಮದ್ ರಫೀಕ್ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಚುನಾವಣೆ ಘೋಷಣೆಗೆ ಒಂದೆರಡು ವಾರ ಇರುವಾಗ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ಮಾಡಿದ್ದಾರೆ. ನೀತಿ ಸಂಹಿತೆಯ ನಂತರ ಯಾವುದೇ ಕಾಮಗಾರಿ ನಡೆಯುವುದಿಲ್ಲವೆಂದು ತಿಳಿದಿದ್ದರೂ ಜನರ ಕಣ್ಣಿಗೆ ಮಣ್ಣೆರಚುವ ತಂತ್ರಗಾರಿಕೆಯನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ರೀತಿಯ ಭೇಟಿ, ಶಂಕುಸ್ಥಾಪನೆಗಳಿoದ ಕೊಡಗು ಜಿಲ್ಲೆಗೆ ಯಾವುದೇ ಲಾಭವಿಲ್ಲ. ಬಜೆಟ್ ನಲ್ಲಿ ಕೊಡಗಿನ ರಸ್ತೆಗಳ ಅಭಿವೃದ್ಧಿಗೆಂದು 100 ಕೋಟಿ ಮೀಸಲಿಟ್ಟಿರುವುದಾಗಿ ಮುಖ್ಯಮಂತ್ರಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ಆದರೆ ಇನ್ನೆರಡು ತಿಂಗಳುಗಳಲ್ಲಿ ಮತ್ತೆ ಮಳೆಗಾಲ ಆರಂಭವಾಗುತ್ತದೆ. ಈ ಬಾರಿಯ ಮಳೆಗೆ ಇನ್ನೆಷ್ಟು ನಷ್ಟ ಸಂಭವಿಸುತ್ತದೋ ತಿಳಿದಿಲ್ಲ.
ಕೇವಲ 100 ಕೋಟಿ ರೂ.ಗಳನ್ನು ನೀಡಿ ಅದನ್ನು ವಿಶೇಷ ಪ್ಯಾಕೇಜ್ ಎಂದು ಕರೆದುಕೊಳ್ಳುತ್ತಿರುವುದು ಸರ್ಕಾರದ ಹೀನ ಸ್ಥಿತಿಗೆ ಸಾಕ್ಷಿಯಾಗಿದೆ. ಇಲ್ಲಿನ ರಸ್ತೆಗಳ ಅಭಿವೃದ್ಧಿಗೆ ಕನಿಷ್ಠ 500 ಕೋಟಿ ರೂ.ಗಳನ್ನಾದರು ಬಿಡುಗಡೆ ಮಾಡಬೇಕಾಗಿತ್ತು. ಅದರೆ ಸ್ವಾಭಿಮಾನಿ ಕೊಡಗಿನ ಜನರ ತಾಳ್ಮೆಯನ್ನೇ ದೌರ್ಬಲ್ಯವೆಂದು ತಿಳಿದಿರುವ ಬಿಜೆಪಿ ಸರ್ಕಾರ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ.
ಫಲಾನುಭವಿಗಳ ಸಮಾವೇಶದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳು ಹಿಂದಿನ ಸರ್ಕಾರಗಳು ಭಿಕ್ಷೆಯ ರೂಪದಲ್ಲಿ ಮಳೆಹಾನಿ ಪರಿಹಾರ ನೀಡಿವೆ ಎಂದು ಟೀಕಿಸಿದ್ದಾರೆ. ಆದರೆ 2018 ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ತಕ್ಷಣ ಸ್ಪಂದಿಸಿದ ಅಂದಿನ ಸಮ್ಮಿಶ್ರ ಸರ್ಕಾರ ಸುಮಾರು 800 ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ನಂತರ ಸಂಭವಿಸಿದ ಮಳೆಹಾನಿ ಸಂತ್ರಸ್ತರಿಗೆ ಮನೆ ನಿರ್ಮಿಸಲು ಬಿಜೆಪಿ ಸರ್ಕಾರಕ್ಕೆ ಇಲ್ಲಿಯವರೆಗೆ ಜಾಗವನ್ನೇ ಗುರುತಿಸಲು ಸಾಧ್ಯವಾಗಿಲ್ಲವೆಂದು ಉಸ್ಮಾನ್ ಹಾಗೂ ಮಹಮ್ಮದ್ ರಫೀಕ್ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಸೂರಿಲ್ಲದವರ ಹೋರಾಟಗಳು ತೀವ್ರಗೊಳ್ಳುತ್ತಿರುವುದರಿಂದ ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದಾಗ ನಿವೇಶನ ರಹಿತ ಬಡ ಹಾಗೂ ಕಾರ್ಮಿಕ ಕುಟುಂಬಗಳಿಗೆ ಸೂರು ಹೊಂದಲು ಕನಿಷ್ಠ 3 ಸೆಂಟ್ ಜಾಗ ನೀಡುವ ಭರವಸೆ ಹೊಂದಲಾಗಿತ್ತು. ಅಲ್ಲದೆ ಅಮಾಯಕ ಜೀವಗಳನ್ನು ಬಲಿ ಪಡೆಯುತ್ತಿರುವ ವನ್ಯಜೀವಿ ಉಪಟಳದ ವಿರುದ್ಧ ಉನ್ನತ ಮಟ್ಟದ ಯೋಜನೆಯನ್ನು ಘೋಷಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಮುಖ್ಯಮಂತ್ರಿಗಳು ಸರ್ಕಾರದ ಸೌಲಭ್ಯ ವಂಚಿತ ಸಾವಿರಾರು ಕುಟುಂಬಗಳ ಹಿತವನ್ನು ಮರೆತು ಬಂದಷ್ಟೇ ವೇಗವಾಗಿ ಮರಳಿದ್ದಾರೆ.
ರಾಜಕೀಯ ಲಾಭಕ್ಕಾಗಿ ಸಮಾವೇಶಗಳನ್ನು ಆಯೋಜಿಸಿ ಇಲ್ಲಿಯವರೆಗೆ ಮಾಡಲಾಗದ ಅಭಿವೃದ್ಧಿ ಕಾರ್ಯಗಳಿಗೆ ಚುನಾವಣಾ ಹೊಸ್ತಿಲಲ್ಲಿ ಶಂಕುಸ್ಥಾಪನೆ ನೆರವೇರಿಸಿ ಜಿಲ್ಲೆಯ ಜನರಲ್ಲಿ ಭ್ರಮೆ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಇದೆಲ್ಲವು ಫಲ ನೀಡುವುದಿಲ್ಲ, ಜಿಲ್ಲೆಯ ಪ್ರಜ್ಞಾವಂತ ಮತದಾರರು ಸರಿಯಾದ ಪಾಠವನ್ನು ಕಲಿಸಲಿದ್ದಾರೆ ಎಂದು ಉಸ್ಮಾನ್ ಭವಿಷ್ಯ ನುಡಿದ್ದಾರೆ.








