
ವಿರಾಜಪೇಟೆ ಜು.25 NEWS DESK : ಕೊಡವ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಯನ್ನು ಇಂದಿನ ಯುವ ಪೀಳಿಗೆಗೆ ತಲುಪಿಸಿ, ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗುವ ಮಹತ್ತರ ಜವಾಬ್ದಾರಿ ಕೊಡವ ಜನಾಂಗದ ಪ್ರತಿಯೊಬ್ಬರ ಮೇಲಿದೆ ಎಂದು ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು. ವಿರಾಜಪೇಟೆಯ ಒಂಟಿಅಂಗಡಿ ಭಾಗದಲ್ಲಿರುವ ಕೊಡವ ಸಂಸ್ಥೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಲಾಗಿದ್ದ ಸಂಸ್ಕೃತಿ ಕಾರ್ಯಕ್ರಮದಲ್ಲಿ ‘ಪತ್ತಾಯ’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕೊಡವ ಸಾಹಿತ್ಯ ಅಕಾಡೆಮಿಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂಸ್ಕೃತಿ ಹಾಗೂ ಭಾಷೆಯ ಮಹತ್ವವನ್ನು ಸಾರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ‘ಪತ್ತಾಯ’ ಬಿಡುಗಡೆಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಾಗ ಮಾತ್ರ ಸಮುದಾಯದ ಬಾಂಧವರಲ್ಲಿ ನಮ್ಮ ಪುರಾತನ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಅರಿವು ಮೂಡಲು ಸಾಧ್ಯ. ಆಧುನಿಕ ಯುಗದ ಪ್ರಭಾವದಿಂದ ಇಂದಿನ ಯುವ ಪೀಳಿಗೆ ನಮ್ಮ ಭಾಷೆ, ಸಾಹಿತ್ಯ ಹಾಗೂ ಆಚಾರ-ವಿಚಾರಗಳಿಂದ ದೂರವಾಗುತ್ತಿರುವುದು ಕಳವಳಕಾರಿ ಎಂದರು. ಕೊಡವ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಕೇವಲ ಸಾಹಿತ್ಯ ಅಕಾಡೆಮಿಗೆ ಮಾತ್ರ ಸೀಮಿತವಾಗಿರದೆ, ಸಮುದಾಯದ ಪ್ರತಿಯೊಬ್ಬರೂ ಜಾಗೃತರಾಗಿ ನಮ್ಮ ತಲೆಮಾರಿನ ಯುವಕರಿಗೆ ಆಚಾರ-ವಿಚಾರಗಳನ್ನು ಧಾರೆ ಎರೆಯಬೇಕೆಂದು ಶಾಸಕರು ವಿನಂತಿಸಿದರು. ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಪ್ರಮುಖರಾದ ಕೋರಂಡ ಶಿವಣ್ಣಿ ಬೆಳ್ಳಿಯಪ್ಪ, ಮಂಡೆಪಂಡ ರಾಬಿನ್ ಮಂದಪ್ಪ, ಮುಕ್ಕಾಟಿರ ಜಮುನ ಬೆಳ್ಳಿಯಪ್ಪ, ಮಚ್ಚಾರಂಡ ಕಿರಣ್ ಹಾಗೂ ಪದಾಧಿಕಾರಿಗಳು, ಸದಸ್ಯರು ಹಾಗೂ ಜನಾಂಗದ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಶುಭಕೋರಿದರು.










