ಮಡಿಕೇರಿ ಮಾ.24 : ಬಿಜೆಪಿಯ ಪೊಳ್ಳು ಭರವಸೆಗಳನ್ನು ನಂಬಿದ ಪರಿಣಾಮವಾಗಿ ಮಹಿಳೆಯರು ಇಂದು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಈ ಬಾರಿ ಬಿಜೆಪಿಯನ್ನು ನಂಬಿ ಮೂರ್ಖರಾಗದೆ ಸಂಕಷ್ಟಗಳಿಗೆ ಸ್ಪಂದಿಸುವ ಕಾಂಗ್ರೆಸ್ ನ್ನು ಬೆಂಬಲಿಸಿ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಕರೆ ನೀಡಿದ್ದಾರೆ.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಪೊನ್ನಂಪೇಟೆ, ವಿರಾಜಪೇಟೆ ಮತ್ತು ನಾಪೋಕ್ಲು ಮಹಿಳಾ ಕಾಂಗ್ರೆಸ್‌ನಿAದ ನಡೆದ ‘ಕಾಂಗ್ರೆಸ್ ಮಹಿಳಾ ಸಮಾವೇಶ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯ ಸುಳ್ಳು ಆಶ್ವಾಸನೆ, ಭರವಸೆಗಳನ್ನು ನಂಬಿದಲ್ಲಿ ನಮಗಿಂತ ಮೂರ್ಖರು ಮತ್ತೊಬ್ಬರಿಲ್ಲವೆಂದು ಹೇಳಿದರು.
ಬಿಜೆಪಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಎಷ್ಟು ಮಹಿಳೆಯರಿಗೆ ಸ್ಥಾನಮಾನ ನೀಡಿದೆ, ಇಂತಹ ವಿಚಾರಗಳ ಬಗ್ಗೆ ಮಹಿಳೆೆಯರು ಪ್ರಶ್ನೆ ಮಾಡಬೇಕು. ಪ್ರಸ್ತುತ ನಮ್ಮ ಜೀವನಕ್ಕಾಗಿ ಬೀದಿಗೆ ಬಂದು ಹೋರಾಟ ಮಾಡುವಂತಹ ಅನಿವಾರ್ಯತೆಯನ್ನು ಬಿಜೆಪಿ ಸೃಷ್ಟಿಸಿದೆಯೆಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ‘ಅನ್ನ ಭಾಗ್ಯ’ ನೀಡಿದ ಕಾರಣ ಕೋವಿಡ್ ಸಂದರ್ಭ ಜನರ ಹೊಟ್ಟೆ ತುಂಬುವಂತಾಯಿತು. ಕೊಡಗಿನ ಇಬ್ಬರು ಬಿಜೆಪಿ ಶಾಸಕರು ಕಳೆದ ಎರಡು ದಶಕಗಳ ಅವಧಿಯಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ಪುಷ್ಪ ಅಮರನಾಥ್ ಪ್ರಶ್ನಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಕೊಡಗಿನಲ್ಲಿ ಕಾಂಗ್ರೆಸ್ ಅಲೆ ಇದೆ. ಅತ್ಯಧಿಕ ಮತಗಳ ಅಂತರದಿಂದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಮಹಿಳೆಯರಿಗೆ ಸೂಕ್ತ ಸ್ಥಾನಮಾನವನ್ನು ಕಾಂಗ್ರೆಸ್ ಪಕ್ಷ ನೀಡುತ್ತಲೆ ಬಂದಿದೆ. ವಿಧಾನಸಭಾ ಚುನಾವಣೆ ಬಳಿಕ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲೂ ಮಹಿಳೆಯರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳ್ಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವಂತೆ ಕರೆ ನೀಡಿದರು.
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಮಾತನಾಡಿ, ಕಾಂಗ್ರೆಸ್ ಮಹಿಳೆಯರಿಗೆ ಗೌರವದ ಸ್ಥಾನ ನೀಡಿದೆ. ಚುನಾವಣೆಯಲ್ಲಿಯೂ ಪ್ರಾತಿನಿಧ್ಯ ನೀಡಲಿದೆ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಶೇ.50 ರಷ್ಟು ಮೀಸಲಾತಿ ನೀಡಲೂ ಕಾಂಗ್ರೆಸ್ ಕಾರಣ. ಕಾಂಗ್ರೆಸ್‌ನಿಂದ ಸಚಿವ ಸ್ಥಾನ, ಎಂಎಲ್‌ಸಿ, ರಾಜ್ಯಸಭಾ ಸದಸ್ಯ ಸ್ಥಾನ ಸೇರಿದಂತೆ ಜಿಲ್ಲಾಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೆ ನೀಡಲಾಗಿದೆ. ಮಹಿಳೆಯರಿಗೆ ಕೊಡಗಿನಲ್ಲಿ ಬಿಜೆಪಿ ಯಾವ ಪ್ರಮುಖ ಸ್ಥಾನ ನೀಡಿದೆಯೆಂದು ಪ್ರಶ್ನಿಸಿದರು.
::: ಮಹಿಳೆಯರ ಕಣ್ಣೀರು :::
ಕೋಮು ಭಾವನೆಗಳನ್ನು ಕೆರಳಿಸಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಇಂತಹ ಭಾಷಣ ಮಾಡಿದವರು ಊರು ಬಿಟ್ಟು ಹೋಗುತ್ತಾರೆ. ಕೇಸ್ ಹಾಕಿಸಿಕೊಂಡವರು ಕೋರ್ಟ್ಗೆ ಅಲೆಯುತ್ತಾರೆ, ಮಹಿಳೆಯರು ಮನೆಯಲ್ಲಿ ಕಣ್ಣೀರು ಹಾಕುತ್ತಿರುತ್ತಾರೆ ಎಂದು ಪೊನ್ನಣ್ಣ ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಪ್ರತೀ ಮಹಿಳೆಯರ ಬ್ಯಾಂಕ್ ಖಾತೆಗೆ ವಾರ್ಷಿಕ 24 ಸಾವಿರ ರೂ. ಸಂದಾಯವಾಗಲಿದೆ. ಹೀಗಾಗಿ ಮಹಿಳೆಯರು ಕಡ್ಡಾಯವಾಗಿ ಬ್ಯಾಂಕ್ ಖಾತೆ ತೆರೆಯಿರಿ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ ಮಾತನಾಡಿ, ಮಹಿಳೆಯರಿಗೆ ರಾಜಕೀಯ ಮೀಸಲಾತಿ ಒದಗಿಸಿರುವ ಕೀರ್ತಿ ಕಾಂಗ್ರೆಸ್‌ನದ್ದು. ಪಕ್ಷದ ಬೆಳವಣಿಗೆಗೆ ಮಹಿಳೆಯರ ಕೊಡುಗೆ ಅತ್ಯಂತ ಪ್ರಮುಖವಾದುದು ಎಂದರು.
ಕೊಡಗಿನಲ್ಲಿ ಮಹಿಳೆಯರು ಕಾಂಗ್ರೆಸ್ ಪರ ಒಲವು ಹೊಂದಿದ್ದಾರೆ. ಎ.ಎಸ್.ಪೊನ್ನಣ್ಣ ಗೆಲವು ಖಂಚಿತವೆAದು ವಿಶ್ವಾಸ ವ್ಯಕ್ತಪಡಿಸಿದ ಅವರು ಭಯ ಮುಕ್ತ ಕೊಡಗಿಗಾಗಿ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ಅಗತ್ಯವೆಂದು ಹೇಳಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಅಧ್ಯಕ್ಷ ಶಿವುಮಾದಪ್ಪ, ಎಂ.ನವೀನ್, ಭವಾನಿ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಿನಾಝ್ ಪ್ರವೀಣ್ ಸೇರಿದಂತೆ ಹಲ ಪ್ರಮುಖರು ಭಾಗವಹಿಸಿದ್ದರು.