ಮಡಿಕೇರಿ ಮಾ.25 : ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕೊಡಗು ಶಾಖೆ, ಸೋಮವಾರಪೇಟೆ ತಾಲ್ಲೂಕು ಒಕ್ಕಲಿಗರ ಸಂಘ , ಸೋಮವಾರಪೇಟೆ ನಗರ ಒಕ್ಕಲಿಗರ ಸಂಘ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ “ಅಂಧ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ವಸತಿಯುತ ಶಿಬಿರ” ನಡೆಯಿತು.
ಸೋಮವಾರಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಎಂ.ಅಣ್ಣಯ್ಯ , ಸೋಮವಾರಪೇಟೆ ತಾಲ್ಲೂಕಿನಲ್ಲಿ ಅಂಧ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ವಸತಿಯುತ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ. ಅಂಧ ವಿಶೇಷಚೇತನರು ಈ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಆರ್. ಮುತ್ತಣ್ಣ ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆ ವತಿಯಿಂದ ವಿಶೇಷಚೇತನರಿಗೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಕೆಲಸವಾಗಿದ್ದು, ಇಂತಹ ಕೆಲಸಗಳಿಗೆ ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ವ್ಯವಸ್ಥಾಪನ ಸಮಿತಿ ಸದಸ್ಯ ಪಿ.ಕೆ.ರವಿ, ಕೊಡಗು ಜಿಲ್ಲೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯು ಆರೋಗ್ಯ, ಸಾಮಾಜಿಕ ಆರ್ಥಿಕ ಸಬಲೀಕರಣ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತ ಸೇವೆಗಳನ್ನು ನೀಡುತ್ತಾ ಬಂದಿದ್ದು, ಜಿಲ್ಲೆಯಲ್ಲಿರುವ ವಿಶೇಷಚೇತನರನ್ನು ಗುರುತಿಸಿ ಅಗತ್ಯವಿರುವ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿದೆ. ಈ ಶಿಬಿರದ ಸದುಪಯೋಗವನ್ನು ವಿಶೇಷಚೇತನರು ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ ಹಾಗೂ ಸಿಬ್ಬಂದಿ ವರ್ಗದವರು, ಜಿಲ್ಲೆಯ ಅಂಧ ವಿಶೇಷಚೇತನರು ಭಾಗವಹಿಸಿದ್ದರು.
ಬೋರಯ್ಯ ನಿರೂಪಿಸಿದರು ಮತ್ತು ಸುರೇಶ್ ಸ್ವಾಗತಿಸಿದರು.