ಮಡಿಕೇರಿ ಮಾ.25 : ಹಾಕಿ ಇಂಡಿಯಾ ವತಿಯಿಂದ ತಮಿಳುನಾಡಿನ ರಾಮನಾಥಪುರಂನಲ್ಲಿ ನಡೆಯುತ್ತಿರುವ ಪ್ರಥಮ ಜೂನಿಯರ್ ಮೆನ್ ಹಾಗೂ ಜೂನಿಯರ್ ವುಮೆನ್ ದಕ್ಷಿಣ ವಲಯ ಹಾಕಿ ಚಾಂಪಿಯನ್ ಶಿಪ್‍ನಲ್ಲಿ ಹಾಕಿ ಕರ್ನಾಟಕದ ಜೂನಿಯರ್ ಮೆನ್ ತಂಡ ಅಗ್ರ ಸ್ಥಾನದಲ್ಲಿದೆ.
18 ಮಂದಿಯ ಕರ್ನಾಟಕ ತಂಡದಲ್ಲಿ ಕೊಡಗಿನ 9 ಆಟಗಾರರಿದ್ದು, ಈ ತನಕ ನಡೆದ ಪಂದ್ಯದಲ್ಲಿ ಹಾಕಿ ಕರ್ನಾಟಕ ಅಮೋಘ ಸಾಧನೆ ತೋರಿ ಅಗ್ರ ಸ್ಥಾನದಲ್ಲಿದೆ. ಈ ತನಕದ ಪಂದ್ಯಗಳಲ್ಲಿ ಹಾಕಿ ಕರ್ನಾಟಕ ತಂಡ ತೆಲಂಗಾಣ ವಿರುದ್ಧ 25-0, ಪಾಂಡಿಚೇರಿ ವಿರುದ್ಧ 19-0, ಆಂಧ್ರ ಪ್ರದೇಶದ ಎದುರು 9-0 ಹಾಗೂ ತಮಿಳುನಾಡು ವಿರುದ್ಧ 4-2 ಗೋಲಿನಿಂದ ಜಯಗಳಿಸಿದೆ.
ಹಾಕಿ ಕರ್ನಾಟಕ ತಂಡದಲ್ಲಿ ಕೊಡಗಿನ ಆಟಗಾರರಾದ ಜೋಕಿರ ಕುಶಾಲ್ ಬೋಪಯ್ಯ, ಕುಲ್ಲೇಟಿರ ವಚನ್ ಕಾಳಪ್ಪ, ಚಿದ್ದಾಟಂಡ ಅಖಿಲ್ ಅಯ್ಯಪ್ಪ, ಕಂಬೀರಂಡ ಮಾವನ್ ಮೇದಪ್ಪ, ಕಲಿಯಂಡ ಚಂಗಪ್ಪ, ಚೋಯಮಾಡಂಡ ಆಕಾಶ್ ಬಿದ್ದಪ್ಪ, ತೀತಮಾಡ ಯಶಸ್ಸ್, ಧ್ರುವ ಸೋಮವಾರಪೇಟೆ, ಶ್ರೀಜಿತ್ ಸೋಮವಾರಪೇಟೆ ಇದ್ದಾರೆ.
ತಂಡದ ಕೋಚ್ ಆಗಿ ಕೊಡಗಿನವರಾದ ಮೇಚಂಡ ತನು ನಂಜಪ್ಪ ಹಾಗೂ ವ್ಯವಸ್ಥಾಪಕರಾಗಿ ಕಾಂಡಂಡ ಅಪ್ಪಣ್ಣ ಕಾರ್ಯನಿರ್ವಹಿಸಿದ್ದಾರೆ.









