ನಾಪೋಕ್ಲು ಮಾ.25 : ರಾಜಕೀಯ ಜನರನ್ನು ದೂರ ಮಾಡಿದರೆ ಕ್ರೀಡೆ ಜನರನ್ನು ಒಗ್ಗೂಡಿಸುತ್ತದೆ
ಎಂದು ಹೈಕೋರ್ಟ್ ವಕೀಲ ಅಜ್ಜಿ ಕುಟ್ಟಿರ ಎಸ್ ಪೊನ್ನಣ್ಣ ಹೇಳಿದರು. ವಿಶ್ವ ಹಿಂದೂ ಪರಿಷತ್
ಹಾಗೂ ಬಜರಂಗದಳದ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ ಇಲ್ಲಿನ ಸರ್ಕಾರಿ ಹಿರಿಯ
ಪ್ರಾಥಮಿಕ ಶಾಲಾ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಹಿಂದೂ ಚಾಂಪಿಯನ್ ಟ್ರೋಫಿ ಕ್ರಿಕೆಟ್
ಮತ್ತು ಹಗ್ಗ ಜಗ್ಗಾಟ ಕ್ರೀಡಾಕೂಟ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು
ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ವಿವಿಧ ಜನಾಂಗದವರ ಕ್ರೀಡಾಕೂಟಗಳು ನಡೆಯುತ್ತಿವೆ. ಹಲವು
ಕ್ರೀಡಾಕೂಟಗಳಲ್ಲಿ ನಾನು ಭಾಗವಹಿಸಿದ್ದೇನೆ. ಆರ್ಥಿಕ ನೆರವನ್ನು ನೀಡಿದ್ದೇನೆ. ಯುವಜನತೆ
ಸಂಘಟಿಸುವ ಕ್ರೀಡಾಕೂಟಗಳಿಗೆ ಆರ್ಥಿಕ ನೆರವು ನೀಡಿದರೆ ಮಾತ್ರ ಅವರು ಮುಂದೆ ಬರಲು
ಮತ್ತು ಕ್ರೀಡಾಕೂಟಗಳು ಜನರನ್ನು ಒಂದುಗೂಡಿಸಲು ಸಾಧ್ಯ ಎಂದರು. ಜಿಲ್ಲೆಯ ಜನರ
ಕ್ರೀಡಾಪೇಮ ಮೆಚ್ಚುವಂಥದ್ದು. ಜಿಲ್ಲೆಯಲ್ಲಿ ಕ್ರೀಡಾಕೂಟಗಳಿಗೆ ಮೂಲಭೂತ ಸೌಲಭ್ಯಗಳ
ಕೊರತೆ ಇದೆ. ಜಿಲ್ಲೆಯ ಕ್ರೀಡಾಪಟುಗಳಿಗೆ ಅನುಕೂಲಕರವಾಗುವಂತೆ ಹೋಬಳಿ ಮಟ್ಟದಲ್ಲಿ
ಹಾಗೂ ಜಿಲ್ಲಾ ಮಟ್ಟದಲ್ಲಿ ಉತ್ತಮ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು
ಎಂದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಾಚಾಳಿಯಂಡ ಅಂಬಿ
ಕಾರ್ಯಪ್ಪ ಅನಿಸಿಕೆ ವ್ಯಕ್ತಪಡಿಸಿ ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ತಿನ ಸಂಚಾಲಕ ನಾಟೊಳಂಡ ಸಚಿನ್
ವಹಿಸಿದ್ದು ಈ ಸಂದರ್ಭ ಕಾಫಿ ಬೆಳೆಗಾರರಾದ ಬಿದ್ದಾಟಂಡ ದಿನೇಶ್, ವಿಶ್ವ ಹಿಂದೂ
ಪರಿಷತ್ತಿನ ಮುನಿಕೃಷ್ಣ ,ಬ್ಲೂ ವಿಲ್ಲ ಹೋಂಸ್ಟೇ ಮಾಲೀಕ ರೋಶನ್, ಉದ್ಯಮಿಗಳಾದ
ಬಲ್ಲಂಡಗಿರಿ,ಕಂಗಡ ಅರುಣ ಎಂಪಿ ಸ್ಟೋರಿನ ಮಧುಮೋಹನ,ಕುಶಾಲನಗರದ ಆಡ್ ಅಂಡ್
ಕೂರ್ಗಿನ ಮಧು, ಗೋ ರಕ್ಷಕ್ ಪ್ರಮುಖ ದಿಲೀಪ್ ಪೂಜಾರಿ, ಬಜರಂಗದಳದ ಸಹ ಸಂಚಾಲಕ
ಕುಮಾರ್, ಗುತ್ತಿಗೆದಾರ ವಿನಾಯಕ ,ಕಕ್ಕಬ್ಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ
ಸಂಪನ್ ಅಯ್ಯಪ್ಪ, ನಾಪೋಕ್ಲು ಗ್ರಾಮ ಪಂಚಾಯತಿ ಸದಸ್ಯರಾದ ಬಿ.ಎಂ.ಪ್ರತೀಪ,
ಮಾಚೇಟಿರ ಕುಶು ಕುಶಾಲಪ್ಪ, ಮಾಜಿ ಸದಸ್ಯ ಸುಶೀಲಮ್ಮ, ಪಾಡಿಅಮ್ಮಂಡ ಜಾಲಿ ಶುಭಾಷ್
,ಬಜರಂಗದಳದ ಸಂಚಾಲಕ ರಾಧಾಕೃಷ್ಣ ರೈ ಸಂಘಟನೆಯ ಪದಾಧಿಕಾರಿಗಳು ಸದಸ್ಯರು
ಉಪಸ್ಥಿತರಿದ್ದರು. ಕ್ರಿಕೆಟ್ ಪಂದ್ಯಾವಳಿಗೆ ಕಾಫಿ ಬೆಳೆಗಾರರಾದ ಬಿದ್ದಾಟಂಡ ದಿನೇಶ್ ಚಾಲನೆ ನೀಡಿದರು.
ಇಂದು ನಡೆದ ಪಂದ್ಯಾಟಗಳಲ್ಲಿ 16 ತಂಡಗಳು ಭಾಗವಹಿಸಿದ್ದು ಅಂತಿಮವಾಗಿ ಪಾಲೂರು
ಶ್ರೀ ಮಹಾಲಿಂಗೇಶ್ವರ ಮತ್ತು ವಿರಾಜಪೇಟೆ ಕ್ರಿಕೆಟರ್ಸ್ ತಂಡಗಳ ಸೆಣೆಸಾಟದಲ್ಲಿ ಪಾಲೂರು
ಶ್ರೀ ಮಹಾಲಿಂಗೇಶ್ವರ ತಂಡ ಮೊದಲ ಹಂತದ ಸೆಮಿಫೈನಲ್ಲಿಗೆ ಭಾಜನವಾಯಿತು. ಎರಡನೇ
ಹಂತದ ಸೆಮಿ ಫೈನಲ್ ಪಂದ್ಯಾಟಕ್ಕೆ ಶಿವಾಜಿ ಕ್ರಿಕೆಟರ್ಸ್ ಬೊಳ್ಳುಮಾಡು ಮತ್ತು ನಾಪೋಕ್ಲು
ಬಜರಂಗದಳ ತಂಡಗಳ ಮಧ್ಯ ಜರುಗಿದ ಪಂದ್ಯಾಟದಲ್ಲಿ ಶಿವಾಜಿ ಕ್ರಿಕೆಟರ್ಸ್ ಬೊಳ್ಳುಮಾಡು
ತಂಡ ಎರಡನೇ ಹಂತಕ್ಕೆ ಆಯ್ಕೆಗೊಂಡಿದೆ. ನಾಳೆ ಜರುಗಲಿರುವ ಪಂದ್ಯಾಟದಲ್ಲಿ 16
ತಂಡಗಳು ಭಾಗವಹಿಸಲಿದೆ. (ವರದಿ : ದುಗ್ಗಳ ಸದಾನಂದ)










