ಮಡಿಕೇರಿ ಮಾ.25 : ಮುಸ್ಲಿಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ.4 ರಷ್ಟು ಮೀಸಲಾತಿಯನ್ನು ರದ್ದು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯವೆoದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮುಸ್ಲಿಮರು ರಾಜ್ಯ ಸರ್ಕಾರಕ್ಕೆ ಏನು ಅನ್ಯಾಯ ಮಾಡಿದ್ದಾರೆ, ಮುಸ್ಲಿಮರ ಮೀಸಲಾತಿಯನ್ನು ಕಸಿದು ನಮಗೆ ನೀಡಿ ಎಂದು ಮತ್ತೊಂದು ಸಮುದಾಯದವರು ಕೇಳಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ನೀತಿಯಂತೆ ರಾಜ್ಯ ಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಸಭೆ, ಸಮಾರಂಭಗಳಲ್ಲಿ ಹೇಳಿಕೊಳ್ಳುತ್ತಾರೆ. ಆದರೆ ಇಂದು ಏಕಾಏಕಿ ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಇದು ತಾರತಮ್ಯದ ಸರ್ಕಾರ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಸಂವಿಧಾನದ ಆಶಯದಂತೆ ಮುಸ್ಲಿಮರಿಗೂ ಪ್ರಜಾಪ್ರಭುತ್ವ ರಾಷ್ಟçದಲ್ಲಿ ಮೀಸಲಾತಿಯ ಹಕ್ಕು ದೊರೆತ್ತಿದೆ. ಆದರೆ ಇದನ್ನು ಇಲ್ಲದಂತೆ ಮಾಡುವ ಮೂಲಕ ಈ ದೇಶದ ಜಾತ್ಯತೀತ ವ್ಯವಸ್ಥೆಗೆ ಮಸಿ ಬಳಿಯಲಾಗಿದೆ ಎಂದು ಟೀಕಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಸಂವಿಧಾನದ ಮೇಲೆ ನೈಜ ಗೌರವವಿದ್ದರೆ ತಕ್ಷಣ ಮುಸ್ಲಿಮರ ಮೀಸಲಾತಿಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಒತ್ತಾಯಿಸಿರುವ ಉಸ್ಮಾನ್ ತಪ್ಪಿದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಮಾಜದಲ್ಲಿ ಒಡಕು ಮೂಡಿಸಿ ರಾಜಕೀಯ ಲಾಭ ಮಾಡಿಕೊಳ್ಳುವ ಭ್ರಮೆಯಲ್ಲಿರುವ ಬಿಜೆಪಿಗೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
::: ಅಧಿಕಾರ ದುರುಪಯೋಗ :::
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದಕ್ಕೆ ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರನ್ನು ನಡೆಸಿಕೊಂಡ ರೀತಿಯೇ ಸಾಕ್ಷಿಯಾಗಿದೆ. ಬಿಜೆಪಿಯ ಹತಾಶ ಮನೋಸ್ಥಿತಿಯೇ ಲೋಕಸಭಾ ಸದಸ್ಯ ಸ್ಥಾನ ಅನರ್ಹಗೊಳ್ಳಲು ಕಾರಣವಾಗಿದೆ.
ರಾಜಕೀಯವಾಗಿ ಎದುರಾಳಿಯನ್ನು ಎದುರಿಸಲಾಗದ ಬಿಜೆಪಿ ಕುತಂತ್ರ ರಾಜಕಾರಣದಲ್ಲಿ ತೊಡಗಿದೆ ಎಂದು ಉಸ್ಮಾನ್ ಆರೋಪಿಸಿದ್ದಾರೆ.










