ಮಡಿಕೇರಿ ಮಾ.25 : ಕುಶಾಲನಗರದ ಮಡಿಕೇರಿ ರಸ್ತೆಯ ರೆಸಾರ್ಟ್ ನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ವಜ್ರದ ಹರಳುಗಳು ಹಾಗೂ ನಗದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್ ಜಿಲ್ಲಾ ಚೋರರನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಸಿಪಿಐ ಕುಶಾಲನಗರ ವೃತ್ತದ ಪೊಲೀಸ್ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ಕುಶಾಲನಗರ ಡಿ ವೈ ಎಸ್ ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಆರೋಪಿಗಳ ಬಂಧನದ ಕುರಿತು ಮಾಹಿತಿ ನೀಡಿದರು.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಬಳಿಯ ನಿವಾಸಿ ಗುಜರಿ ವ್ಯಾಪಾರ ಮಾಡುತ್ತಿದ್ದ ಖಾಸಿಂ (32) ಹಾಗೂ ರೆಂಜಲಾ ಗ್ರಾಮದ ಮೊರತ್ತಿಗುಂಡಿ ಬಳಿಯ ಚಾಲಕ ಮೊಹಮ್ಮದ್ ಸಿರಾಜುದ್ದೀನ್ (37) ಬಂಧಿತ ಆರೋಪಿಗಳಾಗಿದ್ದಾರೆ. ಇವರ ಬಳಿಯಿಂದ 160 ಗ್ರಾಂ ತೂಕದ 8 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ, 1 ಲಕ್ಷ ರೂ. ಮೌಲ್ಯದ ವಜ್ರದ ಹರಳುಗಳು, 2ಲಕ್ಷದ 23 ಸಾವಿರ ನಗದು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಗುಡ್ಡೆಹೊಸೂರು ಬಳಿಯ ರೆಸಾರ್ಟ್ ನಲ್ಲಿ ಕಳೆದ ಅಕ್ಟೋಬರ್ 16 ರಂದು ಪ್ರವಾಸಿಗರು ತಂಗಿದ್ದ ರೂಮ್ ನಲ್ಲಿ ಕಳ್ಳತನ ನಡೆದಿತ್ತು. ಈ ಕುರಿತು ರೆಸಾರ್ಟ್ ಸಿಬ್ಬಂದಿಗಳು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳವು ಪ್ರಕರಣ ಪತ್ತೆ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಅಪರಾಧ ಪತ್ತೆ ದಳ ಹಾಗೂ ಸಿಪಿಐ ಕುಶಾಲನಗರ ವೃತ್ತದವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.
ಈ ತಂಡ ಕಾರ್ಯಪ್ರವೃತ್ತರಾಗಿ ಕಳ್ಳತನ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ 2 ಪ್ರಕರಣ ಹಾಗೂ ಚಿಕ್ಕಮಗಳೂರು ಜಿಲ್ಲೆಯ 2 ಪ್ರಕರಣ ಸೇರಿ ಒಟ್ಟು 4 ಪ್ರಕರಣಗಳು ಪತ್ತೆಯಾಗಿವೆ ಎಂದು ಎಸ್‌ಪಿ ಹೇಳಿದರು.
ಎಸ್‌ಪಿ ಕೆ.ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್.ಸುಂದರರಾಜ್ ಅವರ ನಿರ್ದೇಶನದಂತೆ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಆರ್.ವಿ.ಗಂಗಾಧರಪ್ಪ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಪಿಎಸ್‌ಐಗಳಾದ ಪುನೀತ್, ಶ್ರೀಧರ್, ದಿನೇಶ್ ಕುಮಾರ್, ಎಎಸ್‌ಐ ವೆಂಕಟೇಶ್, ಅರುಣ್, ಸಿಬ್ಬಂದಿಗಳಾದ, ಯೋಗೇಶ್, ನಿರಂಜನ್, ವಸಂತ್, ದಯಾನಂದ್, ಲೋಕೇಶ್, ಪ್ರಕಾಶ್, ಪ್ರವೀಣ್, ಸಂದೇಶ್, ಸಿಡಿಆರ್ ಘಟಕದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣವನ್ನು ಪತ್ತೆ ಹಚ್ಚಿದ ಎಲ್ಲಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ ಬಹುಮಾನ ಘೋಷಣೆ ಮಾಡಿರುವುದಾಗಿ ಎಸ್‌ಪಿ ತಿಳಿಸಿದರು.









