ಮಡಿಕೇರಿ ಮಾ.27 : ಸಮಾಜದ ಕೆಳ ಸ್ತರದಲ್ಲಿರುವ ಶೋಷಿತ ಬಡ ಸಮೂಹವನ್ನು ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆ ಮಾಡುವಲ್ಲಿ, ಈ ರಾಷ್ಟ್ರವನ್ನು ಆರೇಳು ದಶಕಗಳ ಆಳಿದವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಆರೋಸಿದ್ದಾರೆ.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಬಿಜೆಪಿ ವತಿಯಿಂದ ನಡೆದ ‘ಎಸ್‍ಸಿ ಸಮಾವೇಶ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಲೆತಲಾಂತರದಿಂದ ಮುಖ್ಯವಾಹಿನಿಗೆ ಬಾರದ ಜನರನ್ನು ಮುಖ್ಯವಾಹಿನಿಗೆ ತರುವುದೇ ನಮ್ಮ ಗುರಿಯಾಗಿದ್ದು, ಸಂವಿಧಾನದ ಆಶಯಗಳಿಗೆ ಪೂರಕವಾಗಿ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ. ಸುದೀರ್ಘ ಕಾಲ ಆಡಳಿತದ ಚುಕ್ಕಾಣಿ ಹಿಡಿದ ಪಕ್ಷ ಹಿಂದುಳಿದವರ ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದರು.
ರಾಜ್ಯದ ಬಿಜೆಪಿ ಸರಕಾರದಿಂದ ಹಿಂದುಳಿದ ಸಮುದಾಯದ ಕಲ್ಯಾಣಕ್ಕಾಗಿ ಏಕಲವ್ಯ ವಸತಿ ಶಾಲೆ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳನ್ನು ನಿರ್ಮಿಸಲಾಗಿದೆ.
ನಾಪೋಕ್ಲು ಮತ್ತು ಸೋಮವಾರಪೇಟೆ ಬಳಿಯ ತೋಳೂರುಶೆಟ್ಟಳ್ಳಿಯಲ್ಲಿ ವಸತಿ ಶಾಲೆಗಳನ್ನು ನಿರ್ಮಾಣಮಾಡಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಸ್ವಯಂ ಉದ್ಯೋಗಕ್ಕಾಗಿ 40 ಮಂದಿಗೆ ದ್ವಿಚಕ್ರ ವಾಹನಗಳ ವಿತರಣೆ ಸೇರಿದಂತೆ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಬಿಜೆಪಿ ಸರಕಾರ ಜಾರಿಗೆ ತರುವ ಮೂಲಕ ಶೋಷಿತ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಬಿಜೆಪಿ ಸರಕಾರ ಮಾಡುತ್ತಿದೆಯೆಂದು ತಿಳಿಸಿದರು.
ಮುಂಬರುವ ಚುನಾವಣೆಯಲ್ಲಿ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ, ಈ ಹಿಂದಿನಂತೆಯೇ ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರವನ್ನು ಅಧಿಕಾರಕ್ಕೆ ತರುವಂತೆ ಬೋಪಯ್ಯ ಕರೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಇತರೆ ಪಕ್ಷದ ಮುಖಂಡರೊಂದಿಗೆ ಗುರುತಿಸಿಕೊಳ್ಳುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ. ಬೇರೆ ಪಕ್ಷದ ಅಭ್ಯರ್ಥಿಯೊಂದಿಗೆ ಕಾಣಿಸಿಕೊಂಡರೆ ಕ್ರಮ ಅನಿವಾರ್ಯವೆಂದು ಎಚ್ಚರಿಕೆ ನೀಡಿದರು.
ನೆರೆಯ ಜಿಲ್ಲೆಗಳಿಂದ ಜನರನ್ನು ಕರೆಸಿಕೊಂಡು ಕಾಂಗ್ರೆಸ್ ಪಕ್ಷ ಪೊನ್ನಂಪೇಟೆಯಲ್ಲಿ ಸಮಾವೇಶ ಮಾಡಿದೆಯೆಂದು ಲೇವಡಿ ಮಾಡಿದ ರಾಬಿನ್ ದೇವಯ್ಯ, ಬಿಜೆಪಿ ಇಂದು ನೈಜ ಕಾರ್ಯಕರ್ತರ ಬಲದಿಂದ ಸಮಾವೇಶ ಆಯೋಜಿಸಿದೆಯೆಂದು ಹೇಳಿದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬಿಜೆಪಿ ವಿರುದ್ಧ ಆಧಾರ ರಹಿತ ಅಪಪ್ರಚಾರಗಳನ್ನು ಮಾಡಲಾಗುತ್ತಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.
::: ಹಿಂದುತ್ವದ ಆಧಾರದಲ್ಲಿ ಚುನಾವಣೆ :::
ಹಿಂದುತ್ವ ಉಳಿಸುವುದೇ ಬಿಜೆಪಿಯ ಗುರಿಯಾಗಿದೆ. ಹಿಂದುತ್ವ ಉಳಿಸುವಲ್ಲಿ ಎಸ್‍ಸಿ-ಎಸ್‍ಟಿ ಸಮುದಾಯದವರು ಗಮನಾರ್ಹ ಕೊಡುಗೆ ನೀಡಿದ್ದಾರೆ. ಹಿಂದುತ್ವದ ಆಧಾರದಲ್ಲಿ ಈ ಬಾರಿಯ ಚುನಾವಣೆ ನಡೆಯಲಿದೆ. ಆ ಮೂಲಕ ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.
ಎಂಎಲ್‍ಸಿ ಸುಜಾ ಕುಶಾಲಪ್ಪ, ಪಕ್ಷದ ಪ್ರಮುಖರಾದ ಪ್ರತಾಪ್, ನೆಲ್ಲೀರ ಚಲನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಮಾವೇಶದ ಪ್ರಯುಕ್ತ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಸಹಿತ ಪೊನ್ನಂಪೇಟೆಯ ಮುಖ್ಯ ರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು. ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು, ಎಸ್‍ಸಿ ಘಟಕದ ಅಧ್ಯಕ್ಷರು ಪ್ರಮುಖರು ಪಾಲ್ಗೊಂಡಿದ್ದರು.









