ಮಡಿಕೇರಿ ಮಾ.30 : ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಕೊಡಗು ಶಾಖೆ, ತಾಲ್ಲೂಕು ಒಕ್ಕಲಿಗರ ಸಂಘ ಸೋಮವಾರಪೇಟೆ, ನಗರ ಒಕ್ಕಲಿಗರ ಸಂಘ ಸೋಮವಾರಪೇಟೆ ಹಾಗೂ ಸಮುದಾಯದ ಸಹಭಾಗಿತ್ವದೊಂದಿಗೆ “ಅಂಧ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ವಸತಿಯುತ ಶಿಬಿರ”ದ ಸಮಾರೋಪ ಸಮಾರಂಭ ನಡೆಯಿತು.
ಸೋಮವಾರಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಕೆ.ಜಿ.ವಿಮಲ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಪ್ರತೀ ಕಾರ್ಯಕ್ರಮಗಳಿಗೂ ಭಾಗವಹಿಸಿದ್ದು, ಸಂಸ್ಥೆಯು ಕೊಡಗು ಜಿಲ್ಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಇದೀಗ ಸೋಮವಾರಪೇಟೆಯಲ್ಲಿ ಅಂಧ ವಿಶೇಷಚೇತನರಿಗೆ ಸ್ಥಳ ಪರಿಜ್ಞಾನ ಮತ್ತು ಚಲನವಲನ ಶಿಬಿರ ವಿಶೇಷ ಚೇತನರಿಗೆ ಸಹಕಾರಿಯಾಗಲಿದೆ ಎಂದರು.
ಎಲ್.ಐ.ಸಿ ಅಭಿವೃದ್ಧಿ ಅಧಿಕಾರಿ ಮೋಹನ್ ರಾಮ್ ಮಾತನಾಡಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆಯ ವತಿಯಿಂದ ವಿಶೇಷಚೇತನರಿಗೆ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಕೆಲಸವಾಗಿದ್ದು, ಇಂತಹ ಕೆಲಸಗಳಿಂದ ಅಂಧ ವಿಶೇಷಚೇತನರ ಬಾಳಿನಲ್ಲಿ ಬೆಳಕನ್ನು ಮೂಡಿಸಿದಂತಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಖಜಾಂಚಿ ಡಾ.ಚಂದ್ರಶೇಖರ್, ಸಂಸ್ಥೆಯು ಅನೇಕ ಕಾರ್ಯಕ್ರಮಗಳ ಮೂಲಕ ಸೇವೆಗಳನ್ನು ನೀಡುತ್ತಾ ಬಂದಿದ್ದು, ಅಂಧ ವಿಶೇಷಚೇತನರು ಇದರ ಶಿಬಿರದ ಪ್ರಯೋಜನವನ್ನು ಪಡೆದುಕೊಂಡಿರುವುದಾಗಿ ತಿಳಿಸಿದರು.
ಶಿಬಿರದಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲೆಯ ಒಟ್ಟು ಹದಿನೈದು ಅಂಧ ವಿಶೇಷಚೇತನರಿಗೆ ವೈಟ್ ಕೇನ್ ಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಭವನದ ಮಾಲಿಕರಾದ ಗಣೇಶ್, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕ ಅಂಕಾಚಾರಿ ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಬೋರಯ್ಯ ನಿರೂಪಿಸಿದರು ಮತ್ತು ಸುರೇಶ್ ಸ್ವಾಗತಿಸಿದರು.