ಮಡಿಕೇರಿ ಮಾ.31 : ಭವಿಷ್ಯದಲ್ಲಿ ಕೊಡಗು ಜಿಲ್ಲೆಯ ಫುಟ್ಬಾಲ್ ಆಟಗಾರರು ಕರ್ನಾಟಕ ಹಾಗೂ ಭಾರತ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಲಿದ್ದಾರೆ ಎಂದು ಕಿಕ್ಕ್ ಸ್ಟಾರ್ಟ್ ಫುಟ್ಬಾಲ್ ಕ್ಲಬ್ ಸಂಸ್ಥಾಪಕ ಹಾಗೂ ಸಿ.ಇ.ಓ ಲಕ್ಷ್ಮಣ್ ಭಟ್ರೈ ಅಭಿಪ್ರಾಯಪಟ್ಟರು.
ಅಮ್ಮತ್ತಿಯ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಫುಟ್ಬಾಲ್ ವೇಗವಾಗಿ ಬೆಳೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಜಿಲ್ಲೆಯ ಯುವ ಫುಟ್ಬಾಲ್ ಆಟಗಾರರಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡುವ ಅವಶ್ಯಕತೆ ಇದ್ದು, ಆ ನಿಟ್ಟಿನಲ್ಲಿ ಕಿಕ್ಕ್ ಸ್ಟಾರ್ಟ್ ಫುಟ್ಬಾಲ್ ಕ್ಲಬ್ ಇದೇ ಮೊದಲ ಬಾರಿಗೆ ಆಯ್ಕೆ ಶಿಬಿರ ನಡೆಸಿದ್ದು, ನಿರೀಕ್ಷೆಗೂ ಮೀರಿ ಯುವ ಆಟಗಾರರು ಭಾಗವಹಿಸಿದ್ದಾರೆ ಎಂದರು.
ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಜಿಲ್ಲೆಯ ಫುಟ್ಬಾಲ್ ಬೆಳವಣಿಗೆಗೆ ಸತತವಾದ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಲಕ್ಷ್ಮಣ್ ಭಟ್ರೈ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಮಹಾಪೋಷಕ ಮೋಹನ್ ಅಯ್ಯಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಫುಟ್ಬಾಲ್ ಬೆಳವಣಿಗೆಗೆ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ವಿಶೇಷ ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿದ್ದೇವೆ. ಇದೀಗ ಕಿಕ್ಕ್ ಸ್ಟಾರ್ಟ್ ಫುಟ್ಬಾಲ್ ಕ್ಲಬ್ ಆಶ್ರಯದಲ್ಲಿ ಜಿಲ್ಲಾ ಫುಟ್ಬಾಲ್ ಸಂಸ್ಥೆ ಯುವ ಆಟಗಾರರ ಆಯ್ಕೆ ಶಿಬಿರ ನಡೆಸಿದ್ದೇವೆ ಎಂದು ಮೋಹನ್ ಅಯ್ಯಪ್ಪ ತಿಳಿಸಿದರು.
ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ನಾಗೇಶ್ ಮಾತನಾಡಿ, ಕೊಡಗು ಜಿಲ್ಲೆಯ ಯುವ ಫುಟ್ಬಾಲ್ ಆಟಗಾರರಿಗೆ ಸೂಕ್ತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನಿರಂತರವಾಗಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಆಯ್ಕೆ ಶಿಬಿರವನ್ನು ನಡೆಸಲಿದ್ದೇವೆ. ಅದಲ್ಲದೇ ಕಿಕ್ಕ್ ಸ್ಟಾರ್ಟ್ ಫುಟ್ಬಾಲ್ ಕ್ಲಬ್ ತರಬೇತುದಾರರನ್ನು ಜಿಲ್ಲೆಗೆ ಕರೆಸಿಕೊಂಡು, ವಾರಾತ್ಯಂದಲ್ಲಿ ತರಬೇತಿಯನ್ನು ನಡೆಸಲು ಯೋಜನೆ ಕೈಗೊಂಡಿದ್ದೇವೆ ಎಂದು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ನಾಗೇಶ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ರಾಜ್ಯ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷ ಜಗದೀಶ್ ಕೊಡಗರಹಳ್ಳಿ, ಕಿಕ್ಕ್ ಸ್ಟಾರ್ಟ್ ಫುಟ್ಬಾಲ್ ಕ್ಲಬ್ ತರಬೇತುದಾರರಾದ ಸರ್ವಣ ಧರ್ಮಣ್, ರಘುಕುಮಾರ್, ವಿಮಲ್,ಜಿಲ್ಲಾ ಫೋಟೋ ಅಸೋಸಿಯೇಷನ್ ಖಜಾಂಜಿ ದೀಪು ಮಾಚಯ್ಯ, ಸದಸ್ಯರಾದ ದಿಲನ್ ಉತ್ತಯ್ಯ, ಅರುಣ್ ಅಮ್ಮತ್ತಿ, ಮಹೇಂದ್ರ ಸುಂಟ್ಟಿಕೊಪ್ಪ ಹಾಗೂ ರಾಜ್ಯ ಫುಟ್ಬಾಲ್ ಸಂಸ್ಥೆಯ ತೀರ್ಪುಗಾರ ಇಸ್ಮಾಯಿಲ್ ಕಂಡಕರೆ ಇದ್ದರು.