ಹಿಂದೂ ಸಂಸ್ಕೃತಿಯಲ್ಲಿ ಕರ್ಪೂರಕ್ಕೆ ಎಲ್ಲಿಲ್ಲದ ಸ್ಥಾನಮಾನವಿದೆ. ಯಾವುದೇ ಶುಭಕಾರ್ಯವಿರಲಿ ಅಥವಾ ಪೂಜೆಗಳಿರಲಿ ಕರ್ಪೂರ ಇರಲೇಬೇಕು. ಆದರೆ ಇಷ್ಟಕ್ಕೆ ಕರ್ಪೂರದ ಬಳಕೆ ಮುಗಿಯುವುದಿಲ್ಲ. ಏಕೆಂದರೆ ಆರೋಗ್ಯದ ದೃಷ್ಟಿಯಿಂದಲೂ ಕರ್ಪೂರ ಬಲು ಉಪಕಾರಿ.
ಕರ್ಪೂರದಲ್ಲಿ ಎರಡು ವಿಧ. ಒಂದು ಸೇವನೆಗೆ ಯೋಗ್ಯವಾದ ಕರ್ಪೂರ ಇನ್ನೊಂದು ತಯಾರು ಮಾಡಲ್ಪಟ್ಟ ಕರ್ಪೂರ. ಕರ್ಪೂರದ ಮರದ ಕಾಂಡದಿಂದ ತಯಾರಿಸ್ಪಡುವುದು ಒಂದು ರೀತಿಯ ಕರ್ಪೂರವಾದರೆ ಇನ್ನೊಂದನ್ನು ಟರ್ಪೆಂಟೈನ್ ತೈಲದಿಂದ ತಯಾರಿಸಲಾಗುತ್ತದೆ.
ಕರ್ಪೂರದಲ್ಲಿ ಪ್ರತಿಜೀವಕ ಮತ್ತು ಆಂಟಿಫಂಗಲ್ ಗುಣಗಳಿವೆ. ಈ ಕಾರಣಕ್ಕಾಗಿ, ಇದು ನಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಕರ್ಪೂರ ಮತ್ತು ಕರ್ಪೂರ ಎಣ್ಣೆ ಎರಡೂ ಬಹಳ ಉಪಯುಕ್ತ ವಸ್ತುಗಳು.
ಸಾಮಾನ್ಯವಾಗಿ ನರಗಳ ಉಳುಕುವಿಕೆ. ಉರಿ ಬಾವು ಮತ್ತು ವಾತಗ್ರಸ್ತ ನೋವುಗಳಿಗೆ ಲೇಪಿ ಸಲು ಇದನ್ನು ಉಪಯೋಗಿಸುತ್ತಾರೆ. ಅತಿಸಾರದಂಥ ರೋಗ ಗಳಲ್ಲಿ ಶಮನಕಾರಿ ಯಾಗಿ ಹೃದಯವನ್ನು ಉತ್ತೇಜನಗೊಳಿಸುವಲ್ಲಿ ಉತ್ತೇಜನಕಾರಿ ಯಾಗಿ ಇದರ ಉಪಯೋಗವಿದೆ. ಸೌಮ್ಯ ನಂಜುನಿರೋಧಕ ಹಾಗೂ ಸುಗಂಧಗುಣಯುಕ್ತವಾದ್ದರಿಂದ ಇದನ್ನು ಸೌಂದರ್ಯವರ್ಧಕ ವನ್ನಾಗಿಯೂ ಬಳಸುತ್ತಾರೆ. ಪೂಜಾಸಮಾರಂಭದಲ್ಲಿ ದೇವರ ಮುಂದೆ ಉರಿಸಲು ಉಪಯೋಗಿಸುವ ಕರ್ಪುರದಲ್ಲಿ ಶುದ್ಧ ಕರ್ಪುರದ ಪ್ರಮಾಣ ಅತ್ಯಲ್ಪ; ಏನೂ ಇರುವುದಿಲ್ಲವೆಂದರೂ ತಪ್ಪಾಗಲಾರದು. ಸೆಲ್ಯುಲೋಸ್ ಅಸಿಟೇಟ್ ಮತ್ತು ಸೆಲ್ಯುಲೋಸ್ ನೈಟ್ರೇಟ್ ಎಂಬ ಪ್ಲಾಸ್ಟಿಕುಗಳಲ್ಲಿ ಕರ್ಪುರವನ್ನು ಬಳಸುವುದರಿಂದ ಅವು ಮೃದುತ್ವ ಪಡೆಯುತ್ತವೆ. ಇಂಥ ಮೃದು ಪ್ಲಾಸ್ಟಿಕುಗಳಿಂದ ಬೇಕಾದ ಆಟಿಕೆಗಳನ್ನು ಹಾಗೂ ಜೀವನದ ನಿತ್ಯೋಪಯೋಗಿ ವಸ್ತುಗಳನ್ನು ತಯಾರಿಸಬಹುದು.
ಗುಳ್ಳೆಗಳು ಅಥವಾ ಬೆವರುಸಾಲೆಗಳಿಗೆ ಪರಿಹಾರ: ಕರ್ಪೂರ ಎಣ್ಣೆಯನ್ನು ಚರ್ಮದ ಮೇಲೆ ಹಚ್ಚುವುದರಿಂದ ಬೆವರುಸಾಲೆ ಮತ್ತು ಗುಳ್ಳೆಗಳ ಸಮಸ್ಯೆಗೆ ಪರಿಹಾರ ಕಾಣಬಹುದು.
ಹಳೆಯ ಕಲೆಗಳಿಗೆ ಪರಿಹಾರ: ಮುಖದ ಮೇಲಿರುವ ಹಳೆಯ ಕಲೆಗಳನ್ನು ಅಥವಾ ದೇಹದ ಇತರ ಭಾಗಗಳಲ್ಲಿರುವ ಕಲೆಗಳನ್ನು ಕರ್ಪೂರದ ಎಣ್ಣೆ ಹಚ್ಚುದರಿಂದ ಹೋಗಲಾಡಿಸಬಹುದು.
ಒತ್ತಡ ಕಡಿಮೆ ಮಾಡುತ್ತದೆ: ಕರ್ಪೂರದ ಎಣ್ಣೆಯನ್ನು ಹಣೆಯ ಮೇಲೆ ಹಚ್ಚುವುದರಿಂದ ಒತ್ತಡ ಕಡಿಮೆಯಾಗುತ್ತದೆ.
ಕೂದಲು ಸಮಸ್ಯೆಗೆ ಪರಿಹಾರ: ಕರ್ಪೂರ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೂದಲು ಉದುರುವುದು ಮತ್ತು ತಲೆಹೊಟ್ಟು ಸಮಸ್ಯೆಯನ್ನು ದೂರ ಮಾಡಬಹುದು.
ಬೋಳು ಸಮಸ್ಯೆ: ಇನ್ನು ಬೋಳು ಸಮಸ್ಯೆಯಿದ್ದರೆ ಕರ್ಪೂರ ಎಣ್ಣೆ ಕೂದಲನ್ನು ಮತ್ತೆ ಬೆಳೆಯಲು ಸಹಾಯ ಮಾಡುತ್ತದೆ ಎಂದು ಹೇಳಾಗುತ್ತದೆ. ಇದಕ್ಕಾಗಿ ಕರ್ಪೂರ ಎಣ್ಣೆಯನ್ನು ಮೊಸರಿನಲ್ಲಿ ಬೆರೆಸಿ ಕೂದಲಿನ ಬೇರುಗಳಿಗೆ ಹಚ್ಚಿ ಒಂದು ಗಂಟೆಯ ನಂತರ ಕೂದಲು ತೊಳೆಯಬೇಕು.
ಪಾದದ ತೊಂದರೆಗೆ ಪ್ರಯೋಜನಕಾರಿ: ಪಾದದ ಸಮಸ್ಯೆಯಿದ್ದರೆ, ಒಂದು ಟಬ್‌ನಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಕರ್ಪೂರ ಎಣ್ಣೆ ಮಿಶ್ರಣ ಮಾಡಿ ಪಾದಗಳನ್ನು ಮುಳುಗಿಸಿಡಿ. ಇದರಿಂದ ಪಾದಗಳು ಸ್ವಚ್ಛಗೊಳ್ಳುವುದಲ್ಲದೆ, ಪಾದಗಳಲ್ಲಿನ ಸೋಂಕು ಅಥವಾ ಶಿಲೀಂಧ್ರಗಳ ಸಮಸ್ಯೆಯನ್ನು ದೂರ ಮಾಡುತ್ತದೆ.
ನೋವಿಗೆ ಪರಿಹಾರ: ದೇಹದ ಯಾವುದೇ ಭಾಗವು ನೋವಿನಿಂದ ಕೂಡಿದ್ದರೆ, ಕರ್ಪೂರ ಎಣ್ಣೆಯನ್ನು ಸ್ಪಲ್ಪ ಬಿಸಿ ಮಾಡಿ ನೋವಿರುವ ಭಾಗದಲ್ಲಿ ಮಸಾಜ್ ಮಾಡಿಕೊಳ್ಳಿ. ಇದರಿಂದ ಸಹ ನೋವು ಕಡಿಮೆಯಾಗುತ್ತದೆ.
ಉರಿಯೂತ: ಗಾಯವಾಗಿ ಉರಿಯೂತ ಅನುಭವಿಸುತ್ತಿದ್ದರೆ ಅಥವಾ ಊದಿಕೊಂಡಿದ್ದರೆ ಆ ಭಾಗಕ್ಕೆ ಕರ್ಪೂರದ ಎಣ್ಣೆಯನ್ನು ಹಚ್ಚಿದರೆ ನೋವು ಶಮನವಾಗುತ್ತದೆ. ದೇಹದಲ್ಲಿ ಮೊಡವೆ ಅಥವಾ ತ್ವಚೆಯ ಮೇಲೆ ಇನ್ಯಾವುದೇ ಸಮಸ್ಯೆಗಳಿದ್ದರೆ ಅಲ್ಲಿಗೆ ಕರ್ಪೂರ ಹಚ್ಚಿದರೆ ಉತ್ತಮ.
ಸ್ನಾಯು ಸೆಳೆತ: ಸ್ನಾಯು ಸೆಳೆತವಿರುವ ಜಾಗಕ್ಕೆ ಕರ್ಪೂರ ಹಚ್ಚಿದರೆ ಸೆಳೆತ ನಿಲ್ಲುತ್ತದೆ.
ಶೀತ ನೆಗಡಿ: ಶೀತ ನೆಗಡಿಯಿಂದ ಬಳಲುತ್ತಿದ್ದರೆ, ಮೂಗು ಕಟ್ಟಿದ್ದರೆ ಕರ್ಪೂರದ ಗಂಧವನ್ನು ಒಳಸೇದಿಕೊಳ್ಳುತ್ತಿದ್ದರೆ ಶೀತ ಕಡಿಮೆಯಾಗುತ್ತದೆ.