ವಿರಾಜಪೇಟೆ ಮಾ.31 : ಕೊಡವ ಜನಾಂಗಕ್ಕೆ ಮುಜುಗರ ಉಂಟುಮಾಡುವ ಹೇಳಿಕೆಗಳನ್ನು ನೀಡುವ ಮೂಲಕ ಜನಾಂಗದ ಘನತೆಗೆ ಕುತ್ತು ತರುವವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜ ಎಚ್ಚರಿಕೆ ನೀಡಿದೆ.
ವಿರಾಜಪೇಟೆಯಲ್ಲಿ ಅಖಿಲ ಕೊಡವ ಸಮಾಜದ ಕೇಂದ್ರ ಕಚೇರಿಯಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕೊಡವ ಜನಾಂಗದ ಕೀರ್ತಿ ಬಾನೆತ್ತರದಲ್ಲಿದೆ. ಮಾತ್ರವಲ್ಲ, ಸ್ವಾತಂತ್ರ್ಯಕ್ಕಾಗಿ ತನ್ನ ಜೀವನವನ್ನೆ ಬಲಿದಾನ ಮಾಡಿದ ಹಲವರಿದ್ದಾರೆ. ಕೊಡವರ ಪೂರ್ವಾಪರ ತಿಳಿಯದೆ ಕೊಡವರನ್ನು ಅವಹೇಳನ ಮಾಡುವುದು ಎಷ್ಟು ಸರಿ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಜನಾಂಗದ ಪ್ರಮುಖರು ಕೊಡವ ಜನಾಂಗದ ಹೆಸರಿನಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕಿದೆ ಎಂಬ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ರವಾನಿಸಲು ಸಭೆ ಒಮ್ಮತದ ತೀರ್ಮಾನ ಕೈಗೊಂಡಿತು.
ಕೊಡವ ಜನಾಂಗದಲ್ಲಿ ಕೂಡ ಹಲವಾರು ಸಂಘ, ಸಂಸ್ಥೆ, ಸಂಘಟನೆಗಳಿದ್ದು ಅವರವರ ಕಾರ್ಯವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುತ್ತಿದ್ದಾರೆ, ಜನಾಂಗದ ಒಳಿತಿಗಾಗಿ ಶ್ರಮಿಸುತ್ತಿದ್ದಾರೆ ಹೊರತು, ಅವರು ನೀಡುವ ಅಸಂಬದ್ಧ ಹೇಳಿಕೆಗಳಿಗೆ ಸಂಪೂರ್ಣ ಕೊಡವ ಜನಾಂಗ ಹೊಣೆಗಾರರಲ್ಲ. ಇನ್ನು ಮುಂದೆ ಕೊಡವರ ವಿರುದ್ಧ ಯಾವುದೇ ಪ್ರಚೋದನಕಾರಿ ಹೇಳಿಕೆ ಕಂಡುಬಂದರೆ ಅವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದೆಂದು ತಿಳಿಸಿದರು.
ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ್ಣ ಮತ್ತಿತರರು ಉಪಸ್ಥಿತರಿದ್ದರು.








