ಸೋಮವಾರಪೇಟೆ ಮಾ.31 : ಶ್ರೀ ಆಂಜನೇಯ ದೇವಾಲಯ ಸಮಿತಿ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಅದ್ದೂರಿಯ ರಾಮನವಮಿ ಉತ್ಸವ ಗುರುವಾರ ರಾತ್ರಿ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ನಡೆಯಿತು.
ಒಂದು ವಾರದಿಂದ ಅಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಪ್ರತಿನಿತ್ಯ ಶ್ರೀರಾಮನಿಗೆ ವಿವಿಧ ಅಲಂಕಾರಗಳು ನಡೆಯಿತು.
ಗುರುವಾರ ಬೆಳಗ್ಗಿನಿಂದಲೇ ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ಕೋಸಂಬರಿ, ಪಾನಕ, ಮಜ್ಜಿಗೆವಿತರಿಸಲಾಯಿತು. ಜ್ಞಾನವಿಕಾಸ ಶಾಲಾ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಸಾರ್ವಜನಿಕರಿಗೆ ಅನ್ನದಾನ ನಡೆಯಿತು.
ಸಂಜೆ ಶ್ರೀ ರಾಮನ ವಿಗ್ರಹವನ್ನು ಹೊತ್ತು ತಾಲೂಕಿನ ವಿವಿಧ ಗ್ರಾಮಗಳಿಂದ ವಿದ್ಯುತ್ ಅಲಂಕೃತ ಮಂಟಪಗಳು ಹಾಗು ಸ್ತಬ್ದ ಚಿತ್ರಗಳೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ಕೇರಳದ ಚಂಡೆವಾದ್ಯ, ವಿವಿಧ ಜಾನಪದ ಕಲಾ ತಂಡಗಳ ಪ್ರದರ್ಶನ, ಪಟಾಕಿ ಸಿಡಿಮದ್ದಿನೊಂದಿಗೆ ಶೋಭಾಯಾತ್ರೆ ನಡೆಯಿತು.
ಉತ್ಸವ ಸಮಿತಿ ಅಧ್ಯಕ್ಷ ಸುಭಾಶ್ ತಿಮ್ಮಯ್ಯ, ಅಂಜನೇಯ ದೇವಾಲಯ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಎಸ್.ಎಲ್.ಸೀತಾರಾಮ್, ದೇವಾಲಯ ಸಮಿತಿ ಅಧ್ಯಕ್ಷರಾದ ಬನ್ನಳ್ಳಿ ಗೋಪಾಲ್, ಉತ್ಸವ ಸಮಿತಿ ಉಪಾಧ್ಯಕ್ಷರಾದ ಎಂ.ಬಿ.ಉಮೇಶ್ ಮತ್ತಿತರರು ಇದ್ದರು.










