ಮಡಿಕೇರಿ ಏ.1 : ನಿವೇಶನದ ಹಕ್ಕು, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡು ನಿವಾಸಿಗಳು ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಮಡಿಕೇರಿ ತಾಲ್ಲೂಕಿನ ಪಾಲೇಮಾಡು ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ಹೋರಾಟ ನಡೆಸುತ್ತಿರುವ ನಿವಾಸಿಗಳು ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರ ಉದ್ಯಮಿಗಳಿಗೆ ನೂರಾರು ಏಕರೆ ಸರಕಾರಿ ಜಾಗವನ್ನು ನೀಡುತ್ತಿದೆ. ಶ್ರೀಮಂತ ಭೂಮಾಲೀಕರಿಗೆ ಅವರ ಪಿತ್ರಾರ್ಜಿತ ಆಸ್ತಿ ಎಷ್ಟೇ ಇದ್ದರೂ, ಒತ್ತುವರಿ ಜಾಗವನ್ನು ಮೂವತ್ತು ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗಿದೆ. ಬಡವರು ಕನಿಷ್ಟ ಸೂರಿಗಾಗಿ 94, 94ಸಿ ಯಡಿ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಲ್ಲದೇ 53, 57 ನಮೂನೆಯಲ್ಲಿ ಅರ್ಜಿ ಸಲ್ಲಿಸಿದರೂ ಅಕ್ರಮ ಸಕ್ರಮದಡಿ ಅರ್ಜಿ ತಿರಸ್ಕೃತವಾಗುತ್ತಿರುವುದು ಕಂಡುಬಂದಿದೆ. ಸರ್ಕಾರವು ಬಡವರಿಗೊಂದು, ಒತ್ತುವರಿದಾರರಿಗೊಂದು ನ್ಯಾಯ ಎನ್ನುವಂತೆ ವರ್ತಿಸುತ್ತಿದೆ. ಇದು ಸರಕಾರದ ಮಲತಾಯಿ ಧೋರಣೆಯಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಖುದ್ದಾಗಿ ಪಾಲೇಮಾಡು ಕಾನ್ಶಿರಾಂ ನಗರಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆ ಹರಿಸಬೇಕು. ನಿವೇಶನ ರಹಿತರಿಗಾಗಿ ವಿಶೇಷ ಯೋಜನೆ ಎಂದು ಪರಿಗಣಿಸಿ ಕನಿಷ್ಟ ಮೂರು ಮುಕ್ಕಾಲು ಸೆಂಟ್ ಜಾಗ ನೀಡಲು ಕ್ರಮ ಕೈಗೊಳ್ಳಬೇಕು.
ಪರಿಶಿಷ್ಟ ಜಾತಿ-ಪಂಗಡದ ಕುಟುಂಬಗಳು ಇಲ್ಲಿ ಶೇ.65 ರಷ್ಟಿದ್ದು, ಸಮಾಜ ಕಲ್ಯಾಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂಬೇಡ್ಕರ್ ಭವನ, ಕಾಂಕ್ರೀಟ್ ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿ ಕೆಲಸಕ್ಕೆ ಅನುದಾನ ವಿನಿಯೋಗಿಸಬೇಕೆಂದು ಒತ್ತಾಯಿಸಿದರು.









