ಶ್ರೀಮಂಗಲ ಏ.2 : ಟಿ.ಶೆಟ್ಟಿಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚೆಟ್ಟಂಗಡ ಕುಟುಂಬದ ಆಶ್ರಯದಲ್ಲಿ ಎರಡನೇ ವರ್ಷದ ಕೊಡವ ಕೌಟುಂಬಿಕ ಹಗ್ಗ ಜಗ್ಗಾಟ ಪಂದ್ಯಾವಳಿಗೆ ಭಾನುವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಪಂದ್ಯಾವಳಿಗೆ ಮುನ್ನ ಟಿ.ಶೆಟ್ಟಿಗೇರಿ ಕೊಡವ ಸಮಾಜದಿಂದ ಮುಖ್ಯ ಮಾರ್ಗದಲ್ಲಿ ಆಟದ ಮೈದಾನದವರೆಗೆ ಕೊಡವ ಸಂಸ್ಕೃತಿಯ ಶ್ರೀಮಂತಿಕೆಯನ್ನು ಸಾರುವ ಸಾಂಸ್ಕೃತಿಕ ಮೆರವಣಿಗೆ ಗಮನ ಸೆಳೆಯಿತು.ಚೆಟ್ಟಂಗಡ ಕುಟುಂಬ ಹಗ್ಗ ಜಗ್ಗಾಟ ಪಂದ್ಯಾವಳಿಯಿಂದ ಟಿ. ಶೆಟ್ಟಿಗೇರಿ ಪಟ್ಟಣ ಮತ್ತು ಆಟದ ಮೈದಾನದಲ್ಲಿ ಹಬ್ಬದ ಸಡಗರ ಸಂಭ್ರಮ ಮೂಡಿಸಿದೆ. ಮೆರವಣಿಗೆಯಲ್ಲಿ ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ ಪಾಟ್, ಬಾಳೋ ಪಾಟ್,ಒಡ್ಡೋಲಗ ಸಹಿತ ನೂರಾರು ಮಹಿಳೆಯರು, ಮಕ್ಕಳು, ಪುರುಷರು ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರಗು ನೀಡಿದರು.
ಮೈದಾನದಲ್ಲಿ ಊರ್ ತಕ್ಕರಾದ ಚೆಟ್ಟಂಗಡ ಹ್ಯಾರಿ ಅವರು ಮೈದಾನವನ್ನು ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ದೇಶ ತಕ್ಕರು ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ಹಗ್ಗ ಜಗ್ಗಾಟ ಕ್ರೀಡೆ ತುಂಬಾ ಹಳೆಯ ಇತಿಹಾಸವನ್ನು ಹೊಂದಿದೆ. 12ನೇ ಶತಮಾನದಲ್ಲಿ ಈ ಕ್ರೀಡೆ ಚಾಲ್ತಿಗೆ ಬಂದಿತ್ತು.ಕೊಡಗಿನಲ್ಲಿ ಪೊನ್ನೋಲತಂಡ ಕುಟುಂಬ ಕೊಡವ ಕೌಟುಂಬಿಕ ಪಂದ್ಯಾವಳಿಯಾಗಿ ಕಳೆದ ವರ್ಷ ನಡೆಸಿದ್ದು,ಹಗ್ಗ ಜಗ್ಗಾಟವನ್ನು ಜಿಲ್ಲೆಯಲ್ಲಿ ಜನಪ್ರಿಯಗೊಳಿಸಲು ಅಡಿಗಲ್ಲು ಹಾಕಿದೆ ಎಂದು ಶ್ಲಾಘಿಸಿದರು. ಚೆಟ್ಟಂಗಡ ಕುಟುಂಬ ಎರಡನೇ ವರ್ಷದ ಹಗ್ಗ ಜಗ್ಗಾಟ ಪಂದ್ಯಾವಳಿಯನ್ನು ನಡೆಸುತ್ತಿರುವುದು ಸಂತೋಷವಾಗಿದೆ. ಕೊಡವ ಜನಾಂಗ ಹಾಕಿ ಕ್ರೀಡೆಗೆ ಸೀಮಿತವಲ್ಲ,ಇತರ ಕ್ರೀಡೆಯಲ್ಲೂ ಆಸಕ್ತಿ-ಪ್ರತಿಭೆ ಹೊಂದಿರುವುದು ಇದರಿಂದ ಗೊತ್ತಾಗುತ್ತದೆ. ಕೃಷಿಯ ಒತ್ತಡದಲ್ಲಿಯೂ ಕೊಡವ ಜನಾಂಗ ಹಾಕಿ,ಕ್ರಿಕೆಟ್, ಹಗ್ಗಜಗ್ಗಾಟಗಳಂತಹ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ದೊಡ್ಡ ಸಾಧನೆಯಾಗಿದೆ. ಹಗ್ಗ ಜಗ್ಗಾಟ ಶಾರೀರಿಕ ಶಕ್ತಿಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಕೊಡವ ಕುಟುಂಬ ಹಗ್ಗಜಗಾಟ ಪಂದ್ಯಾವಳಿಯನ್ನು ಯಶಸ್ವಿಯಾಗಿ ಮುಂದೆಯೂ ನಡೆಸುವಂತಾಗಲಿ ಎಂದು ಕರೆ ನೀಡಿದರು.
ತಾವಳಗೇರಿ ಮೂಂದ್ ನಾಡ್, ನಾಡ್ ತಕ್ಕರಾದ ಕೈಬುಲೀರ ಹರೀಶ್ ಅಪ್ಪಯ್ಯ ಅವರು ಮಾತನಾಡಿ ಪೊನ್ನೋಲತಂಡ ಕುಟುಂಬ ಕಳೆದ ವರ್ಷ ಪ್ರಥಮ ಬಾರಿಗೆ ಕೊಡವ ಕೌಟುಂಬಿಕ ಸ್ಪರ್ಧೆಯನ್ನು ಏರ್ಪಡಿಸುವ ಅಲೋಚನೆಯಲ್ಲಿದ್ದಾಗ ಜಿಲ್ಲೆಯಲ್ಲಿ ಈ ಕ್ರೀಡೆಗೆ ಎಷ್ಟರ ಮಟ್ಟಿಗೆ ಪ್ರೋತ್ಸಾಹ ಸಿಗಬಹುದೆಂಬ ಸಂಶಯವಿತ್ತು.ಆದರೂ ಕಳೆದ ವರ್ಷ 42 ತಂಡಗಳು ಭಾಗವಹಿಸಿದ್ದವು, ಪ್ರಸಕ್ತ ವರ್ಷ 177 ತಂಡ ಭಾಗವಹಿಸಿವೆ, ಹಗ್ಗ ಜಗ್ಗಾಟಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರೋತ್ಸಾಹ ದೊರೆಯುತ್ತದೆ ಎಂಬುದ್ದಕ್ಕೆ ಇದು ಸಾಕ್ಷಿಯಾಗಿದೆ. ಹೀಗೆ ಹೆಚ್ಚೆಚ್ಚು ತಂಡಗಳು ಮುಂದಿನ ವರ್ಷಗಳಲ್ಲಿ ಭಾಗವಹಿಸುವಂತಾಗಲಿ.
ಇಂತಹ ಸ್ಪರ್ಧೆ ಕುಟುಂಬದ ಒಗ್ಗಟ್ಟನ್ನು ಬೆಸೆಯುತ್ತದೆ. ಕೊಡವಾಮೆ ಬೆಳವಣಿಗೆಗೂ ಪ್ರೋತ್ಸಾಹ ನೀಡುತ್ತದೆ. ಇಂತಹ ಪಂದ್ಯಾವಳಿಯನ್ನು ನಡೆಸುವ ಕುಟುಂಬಗಳಿಗೆ ಎಲ್ಲರೂ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.
ಮತ್ತೋರ್ವ ಅತಿಥಿ ಅತಿಥಿ ಟಿ. ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅವರು ಮಾತನಾಡಿ ಸಣ್ಣ ಜಿಲ್ಲೆಯಾದರೂ ದೇಶದ ಕ್ರೀಡೆ ಹಾಗೂ ಸೇನೆಗೆ ಕೊಡಗು ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಕೊಡವ ಹಾಕಿ ಉತ್ಸವವನ್ನು ಪಾಂಡಂಡ ಕುಟ್ಟಣಿ ಅವರು ಹುಟ್ಟು ಹಾಕಿದ ನಂತರ ಕೊಡಗು ಜಿಲ್ಲೆಯ ಕ್ರೀಡಾ ಚಿತ್ರಣವೇ ಬದಲಾಗಿದೆ. ಹಾಕಿ ಉತ್ಸವದ ಪ್ರೇರಣೆಯಿಂದ ಜಿಲ್ಲೆಯ ಇತರ ಜನಾಂಗಗಳು ಸಹ ಕ್ರೀಡಾಕೂಟವನ್ನು ಆಯೋಜಿಸುತ್ತಿವೆ. ಕೇವಲ ಕ್ರೀಡೆಯಾಗಿ ನೋಡದೇ ಹಬ್ಬದಂತೆ ನಡೆಸುತ್ತಿರುವುದು ವಿಶೇಷವಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಕಡೆ ಕ್ರೀಡಾ ಚಟುವಟಿಕೆಗಳು ಕಾಣುತ್ತಿರುವುದು ಒಳ್ಳೆಯ ಬೆಳೆವಣಿಗೆ ಎಂದು ಹೇಳಿದರು.
ವೇದಿಕೆಯಲ್ಲಿ ಪೊನ್ನೋಲತಂಡ ಕುಟುಂಬದ ಅಧ್ಯಕ್ಷ ಮಿಟ್ಟು ಸೋಮಯ್ಯ, ಕೊಡವ ಹಗ್ಗ ಜಗ್ಗಾಟ ಅಕಾಡೆಮಿ ಸ್ಥಾಪಕಾಧ್ಯಕ್ಷ ಪೊನ್ನೋಳತಂಡ ಕಿರಣ್ ಪೊನ್ನಪ್ಪ, ಚೆಟ್ಟಂಗಡ ಕುಟುಂಬದ ಅಧ್ಯಕ್ಷ ವಿಜಯ್ ಕಾರ್ಯಪ್ಪ, ಹಿರಿಯರಾದ ಮಣಿ ನಾಚಪ್ಪ, ಊರ್ ತಕ್ಕ ಹ್ಯಾರಿ, ಶಾಲಾ ಎಸ್ .ಡಿ. ಎಂ. ಸಿ ಅಧ್ಯಕ್ಷೆ ಜ್ಯೋತಿ, ಹಾಜರಿದ್ದರು.
ವಿಜಯ್ ಕಾರ್ಯಪ್ಪ ಸ್ವಾಗತಿಸಿ,ಚೆಟ್ಟಂಗಡ ಕುಟುಂಬ ಕಾರ್ಯದರ್ಶಿ ರವಿ ಸುಬ್ಬಯ್ಯ ಕಾರ್ಯಕ್ರಮ ನಿರ್ವಹಿಸಿದರು. ಚೆಟ್ಟಂಗಡ ಕುಟುಂಬದ ಮಹಿಳಾ ತಂಡದಿಂದ ಸ್ವಾಗತ ನೃತ್ಯ, ಬಾಲಕಿ ಲೇಖನಾ ಉತ್ತಪ್ಪ ಅವರಿಂದ ಭರತನಾಟ್ಯ ಗಮನ ಸೆಳೆಯಿತು.
::: ಮಹಿಳಾ ಪ್ರದರ್ಶನ ಪಂದ್ಯ :::
ಮಹಿಳಾ ಪ್ರದರ್ಶನ ಪಂದ್ಯದಲ್ಲಿ ಬಾಂಡಿಂಗ್ ಬ್ಲೂಮ್ಸ್ ಪೊಮ್ಮಕ್ಕಡ ಕೂಟ ಮತ್ತು ಟಿ-ಶೆಟ್ಟಿಗೇರಿಯ ಸಂಭ್ರಮ ಮಹಿಳಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಇದರ ನಡುವೆ ನಡೆದ ಪ್ರದರ್ಶನ ಪಂದ್ಯವನ್ನು ನಾಡ್ ತಕ್ಕರಾದ ಕೈಬುಲೀರ ಹರೀಶ್ ಆಪ್ಪಯ್ಯ ಅವರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಪಂದ್ಯದಲ್ಲಿ ಸಂಭ್ರಮ ಮಹಿಳಾ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ ಜಯಗಳಿಸಿತು.
ಪುರುಷರ ಪ್ರದರ್ಶನ ಪಂದ್ಯ: ಶ್ರೀಮಂಗಲ ಕೊಡವ ಸಮಾಜ ತಂಡ ಮತ್ತು ಟಿ.ಶೆಟ್ಟಿಗೇರಿ ಕೊಡವ ಸಮಾಜಗಳ ನಡುವೆ ನಡೆದ ಪುರುಷರ ಪ್ರದರ್ಶನ ಪಂದ್ಯವನ್ನು ದೇಶತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಪಂದ್ಯದಲ್ಲಿ ಶ್ರೀಮಂಗಲ ಕೊಡವ ಸಮಾಜ ಜಯಗಳಿಸಿತು. ಪಂದ್ಯಾವಳಿಯ ಟ್ರೋಫಿಯನ್ನು ಟಿ.ಶೆಟ್ಟಿಗೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅರುಣ್ ಭೀಮಯ್ಯ ಅನಾವರಣಗೊಳಿಸಿದರು. ಪಂದ್ಯಾವಳಿಯಲ್ಲಿ
ಚೆಟ್ಟಂಗಡ ಕುಟುಂಬ, ಪೊನ್ನೋಲತಂಡ ಕುಟುಂಬ ಹಾಗೂ ಹಗ್ಗ ಜಗ್ಗಾಟ ಕೊಡವ ಅಕಾಡೆಮಿ ಧ್ವಜಗಳನ್ನು ಚೆಟ್ಟಂಗಡ ವಿಜಯ್ ಕಾರ್ಯಪ್ಪ, ಪೊನ್ನೋಲತಂಡ ಮಿಟ್ಟು ಸೋಮಯ್ಯ ಮತ್ತು ಪೊನ್ನೋಲತಂಡ ಕಿರಣ್ ಪೊನ್ನಪ್ಪ ಅವರು ಅನುಕ್ರಮವಾಗಿ ಧ್ವಜಾರೋಹಣ ಮಾಡಿದರು.
ಪಂದ್ಯಾವಳಿಯ ಅಂಪೈರ್ ಮತ್ತು ತಾಂತ್ರಿಕ ನಿರ್ದೇಶಕರಾಗಿ
ಪೊನ್ನೋಲತಂಡ ಕಿರಣ್ ಪೊನ್ನಪ್ಪ, ಕೊಣಿಯಂಡ ಮಂಜು,ಉಳುವಂಗಡ ಲೋಹಿತ್ ಭೀಮಯ್ಯ ಕಾರ್ಯನಿರ್ವಹಿಸಿದರು.