ಮಡಿಕೇರಿ ಏ.2 : ಬಸ್ ನಲ್ಲಿ ಸಿಕ್ಕಿದ ಮಾಂಗಲ್ಯ ಸರವನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಹುಣಸೂರು ಡಿಪೋಗೆ ಸೇರಿದ ಹುಣಸೂರು-ಕೊಯಮುತ್ತೂರು ಮಾರ್ಗದ ಬಸ್ ಚಾಲಕ ತಾಂಡವಮೂರ್ತಿ ಹಾಗೂ ನಿರ್ವಾಹಕ ಆರ್.ಪಿ.ಶಿವಕುಮಾರ್ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ನಂಜನಗೂಡು ತಾಲ್ಲೂಕಿನ ಸುತ್ತೂರಿನ ಮಧು ಅವರ ಪತ್ನಿ ಸುಮಾ ಅವರು ಬಸ್ ನಲ್ಲಿ ಮಾಂಗಲ್ಯ ಸರ ಕಳೆದುಕೊಂಡಿದ್ದರು. ಬಸ್ ಇಳಿದ ನಂತರ ಮಾಂಗಲ್ಯ ಸರ ಇಲ್ಲದನ್ನು ಕಂಡು ಗಾಬರಿಯಾಗಿ ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಕಂಡಕ್ಟರ್ ನಂಬರ್ ಪಡೆದು ಸಂಪರ್ಕಿಸಿ ಸರದ ಬಗ್ಗೆ ಮಾಹಿತಿ ನೀಡಿದರು. ಬಸ್ ನಲ್ಲಿ ಮಾಂಗಲ್ಯ ಸರ ಬಿದ್ದಿರುವ ಬಗ್ಗೆ ಬಸ್ ಸಿಬ್ಬಂದಿ ತಿಳಿಸಿದರು.
ಬಸ್ ಚಾಮರಾಜನಗರಕ್ಕೆ ಮರಳಿ ಬಂದ ನಂತರ ಹುಣಸೂರು ಡಿಪೋ ವ್ಯವಸ್ಥಾಪಕರ ಸೂಚನೆಯಂತೆ ಚಾಲಕ ತಾಂಡವಮೂರ್ತಿ ಹಾಗೂ ನಿರ್ವಾಹಕ ಆರ್.ಪಿ.ಶಿವಕುಮಾರ್ ಅವರು ಚಾಮರಾಜನಗರ ಡಿಪೋ ಮ್ಯಾನೇಜರ್ ಕುಮಾರನಾಯ್ಕ ಅವರ ಮೂಲಕ ಮಾಂಗಲ್ಯದ ಸರವನ್ನು ವಾರಸುದಾರರಿಗೆ ಒಪ್ಪಿಸಿದರು.













