ಸುಂಟಿಕೊಪ್ಪ ಏ.3: ಸುಂಟಿಕೊಪ್ಪ ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಶ್ರೀ ಮಳೂರು ಬೆಳ್ಳಾರಿಕ್ಕಮ್ಮ ದೇವರ ವಾರ್ಷಿಕೋತ್ಸವ ಅಂಗವಾಗಿ ಎತ್ತು ಪೋರಾಟ್, ಚೌರಿಕುಣಿತ, ಶ್ರೀ ದೇವರ ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಾಧಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಸಂಪ್ನಗೊಂಡಿತು.
ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಬೆಳ್ಳಾರಿಕ್ಕಮ್ಮ ಉತ್ಸವದ ಅಂಗವಾಗಿ ಕಳೆದ 7 ದಿನಗಳ ಕಾಲ ಸುಂಟಿಕೊಪ್ಪ, ಉಲುಗುಲಿ, ಆಂಜನಗೇರಿ, ಬೆಟಗೇರಿ, ಹರದೂರು ಗ್ರಾಮದ ಗ್ರಾಮಸ್ಥರು ವಾಡಿಕೆಯಂತೆ ವೃತದಲ್ಲಿದ್ದು, ವಾರದ ನಂತರ ದೇವಾಲಯದಲ್ಲಿ ವೃತಾಚರಣೆಯ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
ಕೊಡವ ಮತ್ತು ಗೌಡ ಮನೆ ತನದ ಪುರುಷರು ಮತ್ತು ಯುವಕರು ಕೊಡಗಿನ ಸಾಂಪ್ರಾದಾಯಿಕ ಕೊಡವರ ಉಡುಪು ಕುಪ್ಯಚಾಲೆ ಮತ್ತು ಗೌಡ ಜನಾಂಗದ ಕುಪ್ಪಸ ದಟ್ಟಿ ಬಿಳಿಉಡುಪ್ಪು ಧರಿಸಿ ದೇವಾಲಯದ ಭಂಡಾರವನ್ನು ಗ್ರಾಮದ ಮಂದನ ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ದೇವಾಲಯದಲ್ಲಿ ಭಂಡಾರವನ್ನು ಸಮರ್ಪಿಸಿ, ನಂತರ ಗ್ರಾಮದ ಜನತೆಯಿಂದ ಈಡುಗಾಯಿ ಎತ್ತು ಪೋರಾಟ್, ಚೌರಿಕುಣಿತದಲ್ಲಿ ಪುರುಷರು ಯುವಕರು ಪಾಲ್ಗೊಂಡಿದ್ದರು.
ನಂತರ ಬೆಳ್ಳಾರಿಕ್ಕಮ್ಮ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ನಡೆಸಿ ದೇವಿಗೆ ಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆಯನ್ನು ನಡೆಸಲಾಯಿತು.
ಪೂಜಾ ಕೈಂಕರ್ಯವನ್ನು ಅರ್ಚಕರಾದ ಗಣೇಶ್ ಶರ್ಮ, ಮಂಜುನಾಥ ಉಡುಪ, ಮಂಜುನಾಥ್ ಶರ್ಮ ನೆರವೇರಿಸಿದರು.
ಈ ಬಾರೀ ದೇವಾಲಯದ ಆವರಣದಲ್ಲಿ ವಸಂತ ಕಟ್ಟೆಯನ್ನು ನಿರ್ಮಿಸಲಾಗಿದ್ದು, ಶ್ರೀದೇವರ ಉತ್ಸವ ಮೂರ್ತಿಯ ಪೂಜೆ ಮತ್ತು ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ದರ್ಶನ ಬಲಿ ವಿಶೇಷವಾಗಿ ಗಮನ ಸೆಳೆಯಿತು.
ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಮದ ಜನತೆ ಪಾಲ್ಗೊಂಡಿದ್ದರು.