ಮಡಿಕೇರಿ, NEWS DESK ಆ.28 : ಕಸ್ತೂರಿ ರಂಗನ್ ವರದಿ ಕೇವಲ ಕೊಡಗಿಗೆ ಮಾತ್ರ ಸೀಮಿತವಾಗಿಲ್ಲ. ವರದಿ ಜಾರಿಯಿಂದ ಕೊಡಗಿನ ಕಾಫಿ ಬೆಳೆಗಾರರಿಗೆ ಯಾವುದೇ ತೊಂದರೆಗಳೂ ಇಲ್ಲ. ಈ ವರದಿಯಿಂದ ಕಾವೇರಿ ನೀರನ್ನು ಬಳಸುವ ರಾಜ್ಯದ ಎಲ್ಲಾ ಜನರಿಗೆ ಲಾಭವಾಗಲಿದೆ. ಆದ್ದರಿಂದ ಕರ್ನಾಟಕ ರಾಜ್ಯ ಸರಕಾರ ವರದಿಯನ್ನು ಸಂಪೂರ್ಣವಾಗಿ ನಿರಾಕರಿಸಿರುವುದು ಸರಿಯಲ್ಲ ಎಂದು ಪರಿಸರ ಮತ್ತು ಆರೋಗ್ಯ ಪ್ರತಿಷ್ಠಾನ ಭಾರತದ ಗೌರವ ಕಾರ್ಯದರ್ಶಿ ಕರ್ನಲ್ ಸಿ.ಪಿ.ಮುತ್ತಣ್ಣ ಅವರು ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಸ್ತೂರಿ ರಂಗನ್ ವರದಿಯ ಸಾಧಕ ಬಾಧಕಗಳ ಕುರಿತು ಜಿಲ್ಲೆಯ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಕೇಂದ್ರ ಮತ್ತು ರಾಜ್ಯ ಸರಕಾರದೊಂದಿಗೆ ಚರ್ಚಿಸಿ ಅಗತ್ಯವಿಲ್ಲದ ಅಂಶಗಳನ್ನು ಕೈಬಿಡಲು ಪ್ರಯತ್ನಿಸಬೇಕು. ಆ ಮೂಲಕ ಜನರ ಆತಂಕವನ್ನು ದೂರ ಮಾಡಬೇಕು ಎಂದರು.
ಕಸ್ತೂರಿ ರಂಗನ್ ವರದಿಯಲ್ಲಿ ಕೊಡಗಿನ 53 ಗ್ರಾಮಗಳನ್ನು ಸೂಕ್ಷö್ಮ ಪರಿಸರ ವಲಯಕ್ಕೆ ಒಳಪಡಿಸಲಾಗಿದೆ. ಇದರಲ್ಲಿ ಮಡಿಕೇರಿ ತಾಲ್ಲೂಕಿನ 22 ಗ್ರಾಮಗಳು, ಸೋಮವಾರಪೇಟೆ ತಾಲ್ಲೂಕಿನ 10 ಮತ್ತು ವಿರಾಜಪೇಟೆ ತಾಲ್ಲೂಕಿನ 21 ಗ್ರಾಮಗಳು ಬರುತ್ತವೆ. ಈ ಗ್ರಾಮಗಳನ್ನು ಅರಣ್ಯಕ್ಕೆ ಸೇರ್ಪಡೆ ಮಾಡಲಾಗುತ್ತದೆ, ಗ್ರಾಮಸ್ಥರು ಗ್ರಾಮವನ್ನು ಬಿಡಬೇಕಾಗುತ್ತದೆ ಎನ್ನುವ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಆದರೆ ವರದಿಯಲ್ಲಿ ಈ ರೀತಿಯ ಯಾವುದೇ ವಿಚಾರ ಅಡಕವಾಗಿಲ್ಲ, ಜನರು ಆತಂಕ ಪಡುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದರು.
ಕಾಫಿ ತೋಟಗಳ ನಿರ್ವಹಣೆ, ಕಾಫಿ ಕಣ, ಗೋದಾಮುಗಳ ನಿರ್ಮಾಣ, ನೆರಳಿನ ನಿರ್ವಹಣೆ, ಸ್ವಂತ ಮನೆಗಳ ನಿರ್ಮಾಣಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ್ಲ. ಪರಿಸರಕ್ಕೆ ವಿರುದ್ಧವಾದ “ಟೌನ್ ಶಿಪ್”ಗಳ ನಿರ್ಮಾಣ ಹಾಗೂ ಬೃಹತ್ ಯೋಜನೆಗಳ ಜಾರಿಗೆ ಮಾತ್ರ ಅವಕಾಶ ಸಿಗುವುದಿಲ್ಲ. ಮುಂದಿನ ಭವಿಷ್ಯಕ್ಕಾಗಿ ಕೊಡಗು ಜಿಲ್ಲೆಯ ಪರಿಸರ ಸಂರಕ್ಷಣೆ ಅತ್ಯಗತ್ಯವೆಂದು ತಿಳಿಸಿದರು.
ಕೀಟನಾಶಕಗಳು, ಕಳೆೆ ನಾಶಕಗಳ ಬಳಕೆಗೂ ಯಾವುದೇ ಅಡ್ಡಿ ಇಲ್ಲ. ಇದಕ್ಕೆ ಬದಲಾಗಿ ಹಸಿರ ಪರಿಸರದ ನಡುವೆ ಇರುವ ಕಲ್ಲು ಗಣಿಗಾರಿಕೆಗಳು ವರದಿ ಜಾರಿಯಾದ ಐದು ವರ್ಷಗಳ ಒಳಗಾಗಿ ಮುಚ್ಚಲ್ಪಡಬೇಕಾಗುತ್ತದೆ. ಈ ನಿಯಮ ಅಗತ್ಯವಾಗಿ ಬೇಕಾಗಿದೆ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿಯ ಸೂಕ್ಷö್ಮ ಪರಿಸರ ವಲಯಕ್ಕೆ ಒಳಪಟ್ಟ ಗ್ರ‍್ರಾಮಗಳ ಜನತೆಗೆ “ಆರ್ಥಿಕ ಪ್ರೋತ್ಸಾಹ ಧನ”ವನ್ನು ನೀಡಲಾಗುತ್ತದೆ. ಆದರೆ, ಇಂತಹ ವಿಚಾರಗಳನ್ನು ಜನರಿಗೆ ತಿಳಿಸುವ ಪ್ರಯತ್ನ ನಡೆಸಿಲ್ಲ. ಕೊಡಗಿನ ಪರಿಸರವನ್ನು ಟೌನ್ ಶಿಪ್‌ನಿಂದ, ಮಾರಕ ಯೋಜನೆಗಳಿಂದ ತಡೆಗಟ್ಟುವ ಸಲುವಾಗಿ ಇಡೀ ಜಿಲ್ಲೆಗೆ ಯೋಜನೆಯನ್ನು ಅನ್ವಯಿಸಬೇಕು ಮತ್ತು ಇಲ್ಲಿನ ನಿವಾಸಿಗಳೆಲ್ಲರಿಗೂ ಆರ್ಥಿಕ ಪ್ರೋತ್ಸಾಹ ಧನ ದೊರಕುವಂತಾಗಬೇಕು ಎಂದು ಸಿ.ಪಿ.ಮುತ್ತಣ್ಣ ತಿಳಿಸಿದರು.
ಕೊಡಗಿನ ಭೂದೃಶ್ಯವು ಅನಿಯಂತ್ರಿತ ನಗರೀಕರಣದಿಂದ ಹಾನಿಗೊಳಗಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ವಾಣಿಜ್ಯ ಉದ್ದೇಶದ ಭೂ ಪರಿವರ್ತನೆ ಹಾಗೂ ಅತಿಯಾದ ನಗರೀಕರಣಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಕೊಡಗಿನಲ್ಲಿ ಸ್ಥಳೀಯ ಸಮುದಾಯಗಳನ್ನು ಹೊರತುಪಡಿಸಿ ಇತರರು ದೊಡ್ಡ ಪ್ರಮಾಣದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಯಲು ಬಲವಾದ ನಿರ್ಬಂಧಗಳನ್ನು ವಿಧಿಸಬೇಕು. ಭೂ ಮಾರಾಟವನ್ನು ಜಮ್ಮಾ ಹಿಡುವಳಿದಾರರು ಹಾಗೂ ಗುರುತಿಸಲ್ಪಟ್ಟ ಸ್ಥಳೀಯರಿಗೆ ಸೀಮಿತಗೊಳಿಸುವ ಕುರಿತು ಕ್ರಮ ಕೈಗೊಳ್ಳಬೇಕು.
ಕೆ.ನಿಡುಗಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಗೃಹ ಮಂಡಳಿ ಕೈಗೊಳ್ಳಲು ಉದ್ದೇಶಿಸಿರುವ ಸುಮಾರು 94 ಎಕರೆ ವಿಸ್ತೀರ್ಣದ ಬೃಹತ್ ಯೋಜನೆಯನ್ನು ಮರುಪರಿಶೀಲಿಸಬೇಕು. ಇಂತಹ ಯೋಜನೆ ಕೊಡಗಿನ ಪರಿಸರ ಮತ್ತು ವಿಶೇಷವಾಗಿ ಮಡಿಕೇರಿ ಜನತೆಗೆ ಭವಿಷ್ಯದಲ್ಲಿ ಸಮಸ್ಯೆ ಉಂಟು ಮಾಡಬಹುದು.
ಅದೇ ರೀತಿ ಪೊನ್ನಂಪೇಟೆಯನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಿಸುವ ಹಾಗೂ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆಯನ್ನು ಮರುಪರಿಶೀಲಿಸಬೇಕು. ಇದರಿಂದ ನಗರೀಕರಣಕ್ಕೆ ಮತ್ತಷ್ಟು ಉತ್ತೇಜನ ದೊರೆತು ಸ್ಥಳೀಯ ಸಮುದಾಯಗಳು ಅಂಚಿಗೆ ಸರಿಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಕೊಡಗಿನ ಜನರಿಗೆ ಪರಿಸರ ಸೇವೆಗಳಿಗೆ ಸೂಕ್ತ ಪ್ರತಿಫಲ ದೊರೆಯುವ ವ್ಯವಸ್ಥೆ ರೂಪಿಸಬೇಕು. ಕಾಫಿ ಮತ್ತು ಮೆಣಸಿಗೆ ಉತ್ತಮ ಬೆಲೆ ದೊರೆಯುವಂತೆ ಪರಿಣಾಮಕಾರಿ ಕಾರ್ಯವಿಧಾನಗಳನ್ನು ಜಾರಿಗೆ ತರಬೇಕು. ಇದರೊಂದಿಗೆ ಮಾನವ- ವನ್ಯಜೀವಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕರ್ನಾಟಕ ಅರಣ್ಯ ಇಲಾಖೆ ಸೂಕ್ತ ಮಾರ್ಗಸೂಚಿ ರೂಪಿಸಬೇಕು. ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ವೈಜ್ಞಾನಿಕ ಹಾಗೂ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು.
ಕೊಡಗಿನ ಮೂಲಕ ಬಹುಪಥ ಹೆದ್ದಾರಿಗಳು ಹಾಗೂ ರೈಲು ಮಾರ್ಗಗಳನ್ನು ನಿರ್ಮಿಸುವ ಪ್ರಸ್ತಾವನೆಗಳನ್ನು ಕೈಬಿಡಬೇಕು. ಮೈಸೂರು-ಕುಶಾಲನಗರ ರೈಲ್ವೆ ಯೋಜನೆಯನ್ನೂ ಕೈಬಿಟ್ಟು, ಆ ಹಣವನ್ನು ಕೊಡಗಿನ ಸುಸ್ಥಿರ ಅಭಿವೃದ್ಧಿಗೆ ಬಳಸಬೇಕು. ಕೊಡಗಿನಲ್ಲಿ ಮಾಲಿನ್ಯಕಾರಕ ಕೈಗಾರಿಕೆಗಳು ಅಥವಾ ಪರಿಸರಕ್ಕೆ ಹಾನಿಕಾರಕ ಸ್ಥಾವರಗಳ ಸ್ಥಾಪನೆಗೆ ನಿಷೇಧ ಹೇರಬೇಕು. ಜಿಲ್ಲೆಯ ಜನರಿಗೆ 24 ಗಂಟೆ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಫ್ರಾಂಕ್ಲಿನ್, ಗೋಪಿನಾಥ್ ತಿಮ್ಮಯ್ಯ ಹಾಗೂ ಶಾನ್ ಬೋಪಯ್ಯ ಉಪಸ್ಥಿತರಿದ್ದರು.








