ಮಡಿಕೇರಿ, NEWS DESK ಆ.28 : ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ಆಸಕ್ತಿ ಹಾಗೂ ಗುರಿಗಳನ್ನು ಗುರುತಿಸಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಅವರು ಕರೆ ನೀಡಿದರು.
ಕೊಡಗು ವಿಶ್ವವಿದ್ಯಾಲಯದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿಯ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ವತಿಯಿಂದ ಸಾರಸ್ವತ್ IAS/KAS ಅಕಾಡೆಮಿ, ಮೈಸೂರು ಇವರ ಸಹಯೋಗದಲ್ಲಿ ‘Career Opportunities in Government Sector and Civil Services’ ವಿಷಯದ ಕುರಿತು ಶುಕ್ರವಾರ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮವನ್ನು IQAC ಸಂಚಾಲಕರಾದ ಡಾ. ಸೌಮ್ಯ ಕೆ. ಸ್ವಾಗತಿಸಿ, ಕಾರ್ಯಾಗಾರದ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕದ ಖ್ಯಾತ GMAT ತರಬೇತುದಾರರು ಹಾಗೂ RIMSEಯ ಮಾಜಿ ಪ್ರಾಂಶುಪಾಲರಾದ ಪ್ರೊ. ಚಂದ್ರಶೇಖರನ್ ಜಿ. ಭಾಗವಹಿಸಿದ್ದರು.
ಸಾರಸ್ವತ್ IAS/KAS ಅಕಾಡೆಮಿ, ಮೈಸೂರಿನ ಸ್ಥಾಪಕ ಹಾಗೂ ನಿರ್ದೇಶಕ ಡಾ. ವಸಂತ್ ಕುಮಾರ್ ಎನ್. ಹಾಗೂ ಇತಿಹಾಸ ಮತ್ತು ಸಂವಿಧಾನ ವಿಷಯದ ಸಂಪನ್ಮೂಲ ವ್ಯಕ್ತಿ ನರಸಿಂಹಮೂರ್ತಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.
ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದ ಮೇಜರ್ ಪ್ರೊ. ರಾಘವ ಬಿ., ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪದವಿ ಅಥವಾ ಪಠ್ಯಪುಸ್ತಕದ ಜ್ಞಾನದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಜ್ಞಾನವನ್ನು ಕೌಶಲ್ಯವಾಗಿ, ಕೌಶಲ್ಯವನ್ನು ಸಾಮರ್ಥ್ಯವಾಗಿ ಹಾಗೂ ಸಾಮರ್ಥ್ಯವನ್ನು ಸಾಧನೆಯಾಗಿ ಪರಿವರ್ತಿಸಿಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ವಿಷಯ ಜ್ಞಾನದ ಜೊತೆಗೆ ಸಮಯ ನಿರ್ವಹಣೆ, ಸೃಜನಶೀಲ ಚಿಂತನೆ, ಆತ್ಮವಿಶ್ವಾಸ, ಸಂವಹನ ಕೌಶಲ್ಯ ಹಾಗೂ ಸಮಸ್ಯೆ ಪರಿಹರಿಸುವ ಸಾಮರ್ಥ್ಯ ಅಗತ್ಯವಾಗಿದೆ. ವಿದ್ಯಾರ್ಥಿಗಳು ಸಮಸ್ಯೆಗಳನ್ನು ಅಡೆತಡೆಗಳೆಂದು ಪರಿಗಣಿಸದೆ, ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳುವ ಅವಕಾಶಗಳಾಗಿ ಸ್ವೀಕರಿಸಬೇಕು ಎಂದು ಸಲಹೆ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿ ನಿರಂತರ ಅಧ್ಯಯನ, ದಿನನಿತ್ಯದ ಓದು, ಪ್ರಸ್ತುತ ವಿದ್ಯಮಾನಗಳ ಅರಿವು, ಸಾಮಾನ್ಯ ಜ್ಞಾನ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಸಮಯದ ಸಮರ್ಪಕ ಬಳಕೆ ಪ್ರಮುಖವಾಗಿವೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ಪಷ್ಟವಾದ Career Goal ಹೊಂದಿ, ಅದನ್ನು ಸಾಧಿಸಲು ಸೂಕ್ತ ಅಧ್ಯಯನ ಯೋಜನೆ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ವಿಫಲತೆಯನ್ನು ಭಯಪಡದೆ, ಅದರ ಕಾರಣಗಳನ್ನು ವಿಶ್ಲೇಷಿಸಿ ಮತ್ತಷ್ಟು ಸಿದ್ಧತೆಯೊಂದಿಗೆ ಪುನಃ ಪ್ರಯತ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. “Consistency is the key to success” ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಇದೇ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಹಾಗೂ ಖ್ಯಾತ ವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ “You have to dream before your dreams can come true” ಎಂಬ ಮಾತನ್ನು ಉಲ್ಲೇಖಿಸಿ, ಕನಸು ಕಾಣುವುದು ಯಶಸ್ಸಿನ ಮೊದಲ ಹೆಜ್ಜೆಯಾಗಿದ್ದು, ಅದನ್ನು ಗುರಿಯನ್ನಾಗಿ ಮಾಡಿಕೊಂಡು ಶ್ರಮಿಸಿದಾಗ ಮಾತ್ರ ಕನಸು ನನಸಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಡಾ. ವಸಂತ್ ಕುಮಾರ್ ಎನ್. ಅವರು UPSC, KPSC ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪ, ಅರ್ಹತೆ, ಪರೀಕ್ಷಾ ಸಿದ್ಧತೆ, ಅಧ್ಯಯನ ವಿಧಾನ ಹಾಗೂ ನಾಗರಿಕ ಸೇವೆಗಳಲ್ಲಿನ ವಿವಿಧ ಹುದ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ವಿವರವಾದ ಮಾರ್ಗದರ್ಶನ ನೀಡಿದರು. ಪ್ರಸ್ತುತ ವಿದ್ಯಮಾನಗಳ ಅರಿವು, ಸಾಮಾನ್ಯ ಜ್ಞಾನ, ಸಮಯ ನಿರ್ವಹಣೆ, ಸಮಸ್ಯೆ ಪರಿಹಾರ ಕೌಶಲ್ಯ ಹಾಗೂ ನಿರಂತರ ಅಧ್ಯಯನದ ಮಹತ್ವವನ್ನು ಒತ್ತಿ ಹೇಳಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಡಾ. ವಸಂತ್ ಕುಮಾರ್, ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಕುರಿತು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಹಲವು ಪ್ರಾಯೋಗಿಕ ಸಲಹೆಗಳನ್ನು ನೀಡಿದರು.
ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಸರ್ಕಾರಿ ಉದ್ಯೋಗಗಳು ಹಾಗೂ ನಾಗರಿಕ ಸೇವೆಗಳ ಕುರಿತು ಆಸಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಯಿತು.
ಕಾರ್ಯಕ್ರಮದಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಎಸ್.ಎನ್. ಗಾಯತ್ರಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಶೈಲಾ ಶ್ರೀ, ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕ ಅಲೋಕ್, ಉಪನ್ಯಾಸಕರಾದ ನಿವಿಯಾ ಮೇದಪ್ಪ ಹಾಗೂ ಶರತ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ರಾಜಕೀಯ ವಿಜ್ಞಾನ ವಿಭಾಗದ ಡಾ. ಶೃಂಗಾರ್ ಕೆ.ಎಸ್. ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರನ್ನು ಹಾಗೂ ವಿಶೇಷವಾಗಿ ಸಾರಸ್ವತ್ IAS/KAS ಅಕಾಡೆಮಿ, ಮೈಸೂರು ಇವರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಸರ್ಕಾರಿ ವಲಯ ಹಾಗೂ ನಾಗರಿಕ ಸೇವೆಗಳಲ್ಲಿ ಲಭ್ಯವಿರುವ ವೃತ್ತಿ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸ್ಪಷ್ಟ ಅರಿವು ಮೂಡಿಸುವುದರ ಜೊತೆಗೆ, ತಮ್ಮ ಕನಸುಗಳನ್ನು ಗುರಿಗಳಾಗಿ ಪರಿವರ್ತಿಸಿಕೊಂಡು ನಿರಂತರ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಭವಿಷ್ಯ ರೂಪಿಸಿಕೊಳ್ಳಲು ಈ ಕಾರ್ಯಾಗಾರ ಪ್ರೇರಣೆಯಾಯಿತು







