ಸಿದ್ದಾಪುರ ಏ.4 : (ಅಂಚೆಮನೆ ಸುಧಿ) ಅಭ್ಯತ್‍ಮಂಗಲದ ಶ್ರೀ ವೈದ್ಯನಾಥೇಶ್ವರ ದೇವಾಲಯದ ವಾರ್ಷಿಕೋತ್ಸವ ಹಾಗೂ ವಾರ್ಷಿಕ ನೇಮೋತ್ಸವವು ಏ.8, 9 ಮತ್ತು 10 ರಂದು ನಡೆಯಲಿದೆ.
ಏ.8 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ವೈದ್ಯನಾಥ ಸ್ವಾಮಿಯ ಭಂಡಾರ ಹೇರಿಕೆ, ರಾತ್ರಿ 10ಗಂಟೆಗೆ ಕೋಟೆದ ಬಬ್ಬುಸ್ವಾಮಿ ಮತ್ತು ತಂಗಡಿ ತನ್ನಿಮಾನಿಗ ದೈವಗಳ ನೇಮೋತ್ಸವ ಜರುಗಲಿದೆ.
ಏ.9 ರಂದು ರಾತ್ರಿ ಶ್ರೀ ಚಾಮುಂಡೇಶ್ವರಿ ಕತ್ತಲಕಾನದ ಗುಳಿಗ ಮತ್ತು ಜಾಗದ ಗುಳಿಗ ಹಾಗೂ ಪಂಜುರ್ಲಿ ಗುಳಿಗ ನೇಮೋತ್ಸವ ನಡೆಯಲಿದ್ದು, ಏ.10 ರಂದು ಬೆಳಿಗ್ಗೆ ರಾಹುಗುಳಿಗ ನೇಮೋತ್ಸವ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ಕೋರಿದೆ.
::: ವೈದ್ಯನಾಥೇಶ್ವರ ದೇವಾಲಯದ ಹಿನ್ನೆಲೆ :::
ಅಭ್ಯತ್ ಮಂಗಲದಲ್ಲಿ ವೈದ್ಯನಾಥೇಶ್ವರ ದೇವಾಲಯದ ದೈವಗಳಿಗೆ ನೆಲೆ ಕಲ್ಪಿಸಲು ಇಲ್ಲಿನ ಗ್ರೀನ್ ಫೀಲ್ಡ್ ಎಸ್ಟೇಟ್ ನ ಮಾಲೀಕರು ಜಾಗವನ್ನು ದಾನವಾಗಿ ನೀಡಿದ್ದಾರೆ. ದಕ್ಷಿಣ ಕನ್ನಡ ಭಾಗದಿಂದ ಕಾರ್ಮಿಕರಾಗಿ ಬಂದು ಬದುಕು ಕಂಡುಕೊಂಡಿರುವ ಮುಂಡಾಳ ಜನಾಂಗದ ಮಂದಿ ಈ ಎಸ್ಟೇಟ್ ನಲ್ಲಿ ದುಡಿಯುತ್ತಿದ್ದಾರೆ. ಬಬ್ಬುಸ್ವಾಮಿ ಈ ಜನಾಂಗದ ಮನೆದೇವರಾಗಿದ್ದು, ಕಳೆದ 40 ವರ್ಷಗಳಿಂದ ದೈವಗಳ ಕೋಲ ನಡೆಸಿಕೊಂಡು ಬರುತ್ತಿದ್ದಾರೆ. ದೈವಗಳ ಮೇಲೆ ಕಾರ್ಮಿಕರಿಗಿರುವ ಶ್ರದ್ಧೆ ಮತ್ತು ಭಕ್ತಿಯನ್ನು ಕಂಡು ತೋಟದ ಮಾಲೀಕರು ದೈವ ಸ್ಥಾನಗಳಿಗಾಗಿ ಜಾಗವನ್ನು ನೀಡಿದ್ದಾರೆ.
ವೈದ್ಯನಾಥೇಶ್ವರ ದೇವಾಲಯದಲ್ಲಿ ಪ್ರತಿವರ್ಷ ಏಪ್ರಿಲ್ ನಲ್ಲಿ ದೈವಕೋಲಗಳು ನಡೆಯುತ್ತವೆ. ಬಬ್ಬುಸ್ವಾಮಿ, ತಂಗಾಡಿ, ಪಂಜುರ್ಲಿ ಗುಳಿಗ, ಚಾಮುಂಡೇಶ್ವರಿ, ಜೋಡು ಗುಳಿಗ ಹಾಗೂ ರಾಹು ಗುಳಿಗ ದೈವಗಳ ಕೋಲ ಭಕ್ತರನ್ನು ಆಕರ್ಷಿಸುತ್ತದೆ. ಕಳೆದ 10 ವರ್ಷಗಳಿಂದ ನೇಮೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಸಿದ್ದಾಪುರ, ನೆಲ್ಯಹುದಿಕೇರಿ, ಸೋಮವಾರಪೇಟೆ, ಸುಂಟಿಕೊಪ್ಪ ಮುಂತಾದ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ದೈವಶಕ್ತಿಯ ಹಿನ್ನೆಲೆಯ ಕಥಾ ಹಂದರವನ್ನು ಹೊಂದಿರುವ “ಕಾಂತಾರ” ಚಿತ್ರ ತೆರೆ ಕಂಡ ನಂತರ ಮತ್ತಷ್ಟು ಪ್ರಭಾವಿತಗೊಂಡಿರುವ ಈ ಭಾಗದ ಜನ ವೈದ್ಯನಾಥೇಶ್ವರ ದೇವಾಲಯದಲ್ಲಿ ನಡೆಯುವ ದೈವಕೋಲದ ದಿನಕ್ಕಾಗಿ ಕಾತುರದಿಂದ ಎದುರು ನೋಡುತ್ತಿದ್ದಾರೆ.