ಮಡಿಕೇರಿ ಏ.5 : ಇದೇ ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದಾಗಿ ಹೊದ್ದೂರು ಗ್ರಾ.ಪಂ ಸದಸ್ಯ ಕೊಟ್ಟಮುಡಿ ಕೆ.ಎಂ.ಮೊಯ್ದು ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜಕೀಯ ಪಕ್ಷಗಳು ಜನರ ವಿಶ್ವಾಸವನ್ನು ಕಳೆದುಕೊಂಡಿರುವ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದಾಗಿ ಹೇಳಿದ್ದಾರೆ.
ಗ್ರಾ.ಪಂ ಸದಸ್ಯನಾಗಿ ಕೊಟ್ಟಮುಡಿ ಮತ್ತು ಹೊದವಾಡ ಭಾಗದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಸರ್ಕಾರದಿಂದ ನೀಡಲಾಗುವ ಅನುದಾನವನ್ನು ಜನಪರವಾಗಿ ಸದ್ಬಳಕೆ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತ ನೀಡುವುದಕ್ಕಾಗಿ ಅಭಿವೃದ್ಧಿಪರ ಚಿಂತನೆಯೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದಾಗಿ ಮೊಯ್ದು ಸ್ಪಷ್ಟಪಡಿಸಿದ್ದಾರೆ.









