ವಿರಾಜಪೇಟೆ ಏ.6 : ಸಮೂದಾಯದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಹಾಗೂ ಬದ್ಧತೆ ನೀಡುವ ನಿಟ್ಟಿನಲ್ಲಿ ಬಂಟರ ಸಂಘ ಮುಂದಾಗಬೇಕು ಎಂದು ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ, ವಕೀಲ ಬಿ.ರತ್ನಾಕರ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಹೊರ ವಲಯದ ಖಾಸಾಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಬಂಟರ ಸಂಘದ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಮುದಾಯದ ಕಟ್ಟ ಕಡೆಯ ವ್ಯಕ್ತಿಯನ್ನು ಗುರುತಿಸಿ ಅವರ ಕಷ್ಟಗಳನ್ನು ಅರಿತು ಸಂಘವು ಸಹಾಯ ಮಾಡಬೇಕಾಗಿರುವ ಅನಿವಾರ್ಯತೆಯಿದೆ. ಕೆಲವು ಪಟ್ಟಬದ್ಧ ಹಿತಾಶಕ್ತಿಗಳ ವ್ಯಕ್ತಿಗಳು ತಾನು, ತನ್ನದೇ ತನ್ನಿಂದಲೇ ಎನ್ನುವ ಹುನ್ನಾರದಿಂದ ಸಂಘಟನೆಯನ್ನು ಹುಟ್ಟಾಕಿ ಇಂದು ಜನಾಂಗ ಬಾಂಧವರನ್ನು ದಿಕ್ಕು ತಪ್ಪಿಸುವ ಕೆಲಸ ನಿರಂತವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಸಂಘಟನೆಯು ಎಂದಿಗೂ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವಂತಾಗಬೇಕು. ಕೇವಲ ಭರವಸೆಯ ಗೂಡಗಬಾರದು. ಜಿಲ್ಲಾ ಬಂಟರ ಸಂಘವು ಸಾರ್ವತ್ರಿಕ ಚುನಾವಣೆಯ ನಂತರ ಜನಾಂಗ ಬಾಂಧವರಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಮುಂಬರುವ ದಿನಗಳಲ್ಲಿ ಯೋಜನೆಗಳು ಕಾರ್ಯಗತವಾಗುತ್ತದೆ ಎಂದು ಹೇಳಿದರು.
ಜಿಲ್ಲೆಯ ನಾನಾ ಭಾಗಗಳಲ್ಲಿ ನೆಲೆ ಕಂಡ ಜನಾಂಗ ಬಾಂಧವರನ್ನು ಗುರುತಿಸಿ ಮನೆ ಮನೆಗೆ ತೆರಳಿ ಸಂಘಟಿಸಿ ಬಂಟರ ಸಮೂದಾಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದು ಸಂಘದ ಕರ್ತವ್ಯವಾಗಿದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಶಭರಿಶ್ ಶೆಟ್ಟಿ ಮಾತನಾಡಿ, ಬಂಟರ ಸಂಘವು ಸಮುದಾಯದ ಅಭಿವೃದ್ಧಿಗೆ, ಶಿಕ್ಷಣ ಮತ್ತು ಆರ್ಥಿಕವಾಗಿ ಸಬಲೀಕರಣ ಮಾಡುವ ಯೋಜನೆಗಳಿಗೆ ಬದ್ದರಾಗಿರುವುದಾಗಿದೆ. ಜಿಲ್ಲೆಯಲ್ಲಿ ನೆಲೆಸಿರುವ ಸಮೂದಾಯ ಬಾಂಧವರನ್ನು ಒಗ್ಗೂಡಿಸಿ ಸಂಘಟಿಸಿ ಬೃಹತ್ ಸಮಾವೇಶವನ್ನು ಆಯೋಜಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಬಂಟರ ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ರೈ ಮಾತನಾಡಿ, ಸಮುದಾಯ ಬಾಂಧವರನ್ನು ಒಂದೇ ಸೂರಿನಡಿಯಲ್ಲಿ ಒಂದಾಗಿಸುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿರಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ಡಿ.ನಾರಾಯಣ ರೈ, ತಾಲೂಕು ಅಧ್ಯಕ್ಷ ಭರತ್ ರಾಂ ರೈ ಮತ್ತು ಶಶಾಂಕ್ ಶೆಟ್ಟಿ ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ