ಕುಶಾಲನಗರ ಏ.6 : ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಶೋಷಣೆ ಹಾಗೂ ಅಟ್ಟಹಾಸದ ವಿರುದ್ಧ ಸಮರ ಸಾರಿದ ಮೊದಲ ಮಹಿಳಾ ಧ್ವನಿ ಅಕ್ಕಮಹಾದೇವಿ ಎಂದು ಕಸಾಪ ಜಿಲ್ಲಾ ನಿರ್ದೇಶಕ ಮೆ.ನಾ.ವೆಂಕಟನಾಯಕ್ ಹೇಳಿದರು.
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರದ ಬಸವೇಶ್ವರ ದೇವಾಲಯದಲ್ಲಿ ನಡೆದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹನ್ನೆರಡನೆಯ ಶತಮಾತನದ ಶಿವಶರಣರು ಹಾಗೂ ಶರಣೆಯರು ಲೋಕಕ್ಕೆ ನೀಡಿದ ವಚನಾಮೃತವನ್ನು ಮಕ್ಕಳಿಗೆ ಕಲಿಸುವ ಮೂಲಕ ಸುಸಂಸ್ಕೃತ ಸಮಾಜವನ್ನು ಕಟ್ಟಬಹುದಾಗಿದೆ. ಆದ್ದರಿಂದ ಮಹಿಳೆಯರು ಹಾಗೂ ಮಕ್ಕಳು ಪ್ರತಿ ನಿತ್ಯವು ವಚನಗಳ ಸಾಲುಗಳನ್ನು ಹೇಳುವ ಮೂಲಕ ಅದರ ಸಾರದಂತೆ ಬದುಕಬಹುದು ಎಂದರು.
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಕನ್ನಡದ ನೆಲದಲ್ಲಿ ಒಂದು ಸಾವಿರ ವರ್ಷಗಳ ಹಿಂದೆ 430 ವಚನಗಳನ್ನು ಬರೆಯುವ ಮೂಲಕ ಮೊದಲ ಕವಯತ್ರಿಯಾದ ಅಕ್ಕಮಹಾದೇವಿಯವರ ವಚನಗಳಲ್ಲಿ ಇಹಪರವಾದ ಮತ್ತು ಸಾಮಾಜಿಕವಾದ ಚಿಂತನೆಗಳು ಅಡಕವಾಗಿವೆ. ಆದ್ದರಿಂದ ವಚನಗಳ ಪಠಣ ಪ್ರತಿ ಮನೆ ಮನಗಳಲ್ಲಿ ಆಗಬೇಕಾದ ತುರ್ತು ಅನಿವಾರ್ಯತೆ ಇದೆ ಎಂದರು.
ಇದೇ ಸಂದರ್ಭ ಕುಶಾಲನಗರ ತಾಲ್ಲೂಕು ಅಕ್ಕನ ಬಳಗದ ಅಧ್ಯಕ್ಷೆ ಕಮಲಾ ಉದಯಕುಮಾರ್ ಅವರನ್ನು ಕಸಾಪ ದಿಂದ ಗೌರವಿಸಲಾಯಿತು.
ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಲೇಖನಾ, ಸದಸ್ಯರಾದ ಮಣಿಯಕ್ಕ, ಮೋಹಿನಿ, ಗೀತಾ ಪರಮೇಶ್, ಬೇಬಿ, ಪ್ರಮುಖರಾದ ಸದಾಶಿವ, ರೇವಣ್ಣ, ಶಿವಣ್ಣ, ಮನುದೇವಿ, ಗಾಯತ್ರಿ, ಗೌರಮ್ಮ, ಪಾರ್ವತಿ ಮೊದಲಾದವರಿದ್ದರು.
ಕಾರ್ಯಕ್ರಮಕ್ಕೂ ಮುನ್ನಾ ಮಹಿಳೆಯರಿಂದ ಅಕ್ಕನ ವಚನಗಳ ಗಾಯನ ನಡೆಯಿತು.
ಲೇಖನಾ ಸ್ವಾಗತಿಸಿದರು. ಗೀತಾ ವಂದಿಸಿದರು.