ಮಡಿಕೇರಿ ಏ.6 : ರಾಷ್ಟ್ರದ ಗಡಿಗಳನ್ನು ಕಾಯ್ದು ನಿವೃತ್ತರಾಗಿರುವ ಮಾಜಿ ಸೈನಿಕರು ಒನ್ ರ‍್ಯಾಂಕ್ ಒನ್ ಪೆನ್ಶನ್(ಒಆರ್‍ಒಪಿ) ಯೋಜನೆಯ ನ್ಯೂನ್ಯತೆಗಳಿಂದ ಅನ್ಯಾಯಕ್ಕೆ ಒಳಗಾಗಿದ್ದು, ಯೋಜನೆಯ ಲೋಪಗಳನ್ನು ಸರಿಪಡಿಸುವಂತೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಒಆರ್‍ಒಪಿ ಯೋಜನೆಯಡಿ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುವ ಯೋಧ ಮತ್ತು ಉನ್ನತ ಹುದ್ದೆಗಳನ್ನು ಅಲಂಕರಿಸಿರುವವರ ಪಿಂಚಣಿಯಲ್ಲಿ ಸಾಕಷ್ಟು ವ್ಯತ್ಯಾಸಗಳಿದೆ. ಅದನ್ನು ಸರಿಪಡಿಸುವ ಮೂಲಕ ತಾರತಮ್ಯವನ್ನು ನೀಗಬೇಕೆಂದು ಮನವಿ ಮಾಡಿದರು.
ರಕ್ಷಣಾ ಪಡೆಗಳ ಮಾಜಿ ಸೈನಿಕರುಗಳಿಗೆ ಒಆರ್‍ಒಪಿ 2 ನ್ನು ಕೇಂದ್ರ ಸರ್ಕಾರ 2019 ರ ಜುಲೈ1 ರಿಂದ ಜಾರಿಗೆ ತಂದಿದೆ. ಇದರಲ್ಲಿ ರಕ್ಷಣಾ ಪಡೆಗಳಲ್ಲಿ ಕೆಳಸ್ತರದಲ್ಲಿ ಕಾರ್ಯನಿರ್ವಹಿಸಿದ ಸೈನಿಕರ ಪಿಂಚಣಿಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಸೈನ್ಯದಲ್ಲಿ 15 ರಿಂದ 20 ವರ್ಷ ಸೈನಿಕನಾಗಿ ಸೇವೆ ಸಲ್ಲಿಸಿದಾತ ನಿವೃತ್ತವಾಗಿ ಪಡೆಯುತ್ತಿರುವ ಪಿಂಚಣಿಯ ಮೊತ್ತ ಸರಿ ಸುಮಾರು 13 ಸಾವಿರಗಳಷ್ಟೆ ಇದೆಯೆಂದು ಬೇಸರ ವ್ಯಕ್ತಪಡಿಸಿದರು.
ರಕ್ಷಣಾ ಪಡೆಗಳಲ್ಲಿ ಸೈನಿಕನಾಗಿ ಸೇರುವಾತ ಸುದೀರ್ಘ ಸೇವೆಯನ್ನು ಒಂದೇ ಹುದ್ದೆಯಲ್ಲಿ ಕಳೆಯುತ್ತಾನೆ ಮತ್ತು ಸೇವೆ ಸೇರುವ ಹಂತದಲ್ಲೆ ಈತನ ಪಿಂಚಣಿಯನ್ನು ನಿಗದಿಪಡಿಸಲಾಗುತ್ತದೆ. ಅದೇ ರಕ್ಷಣಾ ಪಡೆಯ ಅಧಿಕಾರಿಯಾಗಿ ಸೇವೆಗೆ ಭರ್ತಿಯಾಗುವವರಿಗೆ ಆರಂಭದಲ್ಲಿ ನಿಗದಿ ಪಡಿಸಲಾದ ಪಿಂಚಣಿ, ಅವರು ಪದೋನ್ನತ್ತಿ ಹೊಂದುವ ಹಂತಗಳಲ್ಲೆಲ್ಲ ಹೆಚ್ಚುತ್ತಾ ಸಾಗುತ್ತದೆ. ಪದೋನ್ನತಿ ಹೊಂದಿ ನಿವೃತ್ತರಾಗುವ ಅಧಿಕಾರಿ ಮಾಸಿಕ ಪಿಂಚಣಿಯಾಗಿ ಸೇವೆಗೆ ಭಡ್ತಿಯಾಗುವ ಹಂತದಲ್ಲಿ ನಿಗದಿಯಾದ ಪಿಂಚಣಿ ಮೊತ್ತಕ್ಕಿಂತ ಶೇ.300 ಕ್ಕೂ ಹೆಚ್ಚಿನ ಅಂದರೆ 1 ಲಕ್ಷಕ್ಕೂ ಹೆಚ್ಚಿನ ಮಾಸಿಕ ಪಿಂಚಣಿ ಪಡೆಯುತ್ತಾರೆ. ಪ್ರಸ್ತುತ ಒಆರ್‍ಒಪಿಯಡಿ ಸೈನಿಕನ ಪಿಂಚಣಿ ಕೇವಲ ಸುಮಾರು ಶೇ.38 ರಷ್ಟು ಮಾತ್ರ ಹೆಚ್ಚಳವಾಗಿದೆಯಷ್ಟೆ. ಇದನ್ನು ಅಧಿಕಾರಿ ವರ್ಗಕ್ಕೆ ಹೆಚ್ಚಿಸಿದ ಅನುಪಾದಂತೆ ಹೆಚ್ಚಿಸಿ ನೀಡಬೇಕು. ಇದರಿಂದ ಕೇವಲ 13 ಸಾವಿರ ಪಿಂಚಣಿ ಪಡೆಯುವ ಸೈನಿಕ ಕನಿಷ್ಟ 60 ಸಾವಿರದ ಆಸುಪಾಸಿನಲ್ಲಿ ಪಿಂಚಣಿಯ ಸೌಲಭ್ಯ ಹೊಂದುವ ಮೂಲಕ ಆತನ ಬದುಕು ಹಸನಾಗುತ್ತದೆಂದು ಕಳಕಳಿಯಿಂದ ನುಡಿದರು.
ಯೋಜನೆಯಿಂದ ಪಿಂಚಣಿಯ ಮೊತ್ತ ಕುಸಿತ!- ಒಆರ್‍ಒಪಿ ಯೋಜನೆಯ ಲೋಪಗಳಿಂದ ಸುಬೇದಾರ್, ಸುಬೇದಾರ್ ಮೇಜರ್, ಹಾನರರಿ ಕ್ಯಾಪ್ಟನ್‍ಗಳ ಮಾಸಿಕ ಪಿಂಚಣಿ ಕಡಿಮೆಯಾಗಿದೆಯೆಂದು ಕೊಟ್ಟುಕತ್ತೀರ ಸೋಮಣ್ಣ ಕಳವಳ ವ್ಯಕ್ತಪಡಿಸಿ, ಪಿಂಚಣಿಯ ಮೊತ್ತ ಕಡಿಮೆಯಾದರು ಈ ಬಗ್ಗೆ ಅಗತ್ಯ ತಿಳುವಳಿಕೆಗಳಿಲ್ಲದೆ ಅವರು ಇಂದಿಗೂ ಧ್ವನಿ ಎತ್ತಿಲ್ಲವೆಂದು ವಿಷಾದಿಸಿದರು.
ಎಂಎಸ್‍ಪಿಯಲ್ಲಿ ತಾರತಮ್ಯ- ರಕ್ಷಣಾ ಪಡೆಗಳಲ್ಲಿ ಮಿಲಿಟರಿ ಸರ್ವೀಸ್ ಪೇ(ಎಂಎಸ್‍ಪಿ) ಎನ್ನುವ ಯೋಜನೆ ಇದ್ದು, ಇದರಡಿ ರಾಷ್ಟ್ರ ರಕ್ಷಣೆಯ ಮಹತ್ತರ ಕಾರ್ಯ ನಡೆಸುವ ಸಂದರ್ಭ, ಅತ್ಯಂತ ಕಠಿಣ ಕಾರ್ಯಗಳಲ್ಲಿ ಅಪಾಯಕ್ಕೆ ಎದೆಗೊಟ್ಟು ಕಾರ್ಯನಿರ್ವಹಿಸುವವರು ಅಂಗವೈಕಲ್ಯತೆಗೆ ಒಳಗಾದರೆ ನೆರವನ್ನು ಒದಗಿಸಲಾಗುತ್ತದೆ. ಇದರಲ್ಲಿ ಸೈನ್ಯದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಸೈನಿಕರಿಗೆ 5200 ರೂ. ನಿಗದಿಪಡಿಸಲಾಗಿದ್ದರೆ, ಅಧಿಕಾರಿಗಳಿಗೆ 10,800 ರೂ. ನಿಗದಿಯಾಗಿದೆ. ಅಂಗವೈಕಲ್ಯತೆಯಲ್ಲು ಸೈನಿಕ ಮತ್ತು ಅಧಿಕಾರಿ ಎಂಬುದಿದೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು, ಎಂಎಸ್‍ಪಿಯಡಿ ಅಂಗವೈಕಲ್ಯತೆಗೆ ಒಳಗಾದವರಿಗೆ ಸಮಾನ ನೆರವನ್ನು ನೀಡುವ ಅಗತ್ಯವಿದೆಯೆಂದು ದೃಢವಾಗಿ ನುಡಿದರು.
ದೊರಕದ ಸವಲತ್ತು- ಮಾಜಿ ಸೈನಿಕರಿಗೆ ಹತ್ತು ಹಲ ಸವಲತ್ತುಗಳು ಸಮಾನವಾಗಿ ದೊರಕುತ್ತಿಲ್ಲ. ಈ ಹಿನ್ನೆಲೆ ಪ್ರಸಕ್ತ ಸಾಲಿನ ಫೆಬ್ರವರಿಯಲ್ಲಿ ದೆಹಲಿಯ ಜಂತರ್ ಮಂತರ್‍ನಲ್ಲಿ ಬೃಹತ್ ಧರಣಿ ನಡೆಸಲಾಗಿತ್ತು. ಆದರೆ, ಇದಕ್ಕೆ ಸ್ಪಂದನ ದೊರಕದ ಹಿನ್ನೆಲೆ ಇದೀಗ ಸಂಘದ ಮೂಲಕ ಪ್ರತಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ಸೇರಿದಂತೆ ಉನ್ನತ ಸ್ಥಾನದಲ್ಲಿರುವವರಿಗೆ ಮನವಿ ಸಲ್ಲಿಸಲಾಗುತ್ತಿದೆಯೆಂದು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಅ.ಕ.ಮಾಜಿ ಸೈನಿಕರ ಸಂಘದ ಕೊಡಗು ಘಟಕದ ಸಂಚಾಲಕರಾದ ವಾಸು ಪಿ.ಎಸ್., ಸುನಿಲ್, ಪ್ರಭಾಕರ್, ಜಂಟಿ ಕಾರ್ಯದರ್ಶಿ ಅರುಣ ಪಿ.ಜಿ., ಮಹಿಳಾ ಸಂಚಾಲಕರಾದ ಭವಾನಿ ಉಪಸ್ಥಿತರಿದ್ದರು.