ಸುಂಟಿಕೊಪ್ಪ ಏ.7 : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಪವಿತ್ರ ಗುರುವಾರದ ಸಂಜೆ ಕಡೆಯ ಭೋಜನ ಮತ್ತು ಶುಭ ಶುಕ್ರವಾರ (ಗುಡ್ ಫ್ರೈಡೇ) ಅಂಗವಾಗಿ ವಿಶೇಷ ಬಲಿಪೂಜೆ ನಡೆಯಿತು.
ಸಂತ ಮೇರಿ ಶಾಲಾ ಆವರಣದಲ್ಲಿ ನಡೆದ ಪ್ರಾರ್ಥನಾ ಕೂಟವನ್ನು ಮೈಸೂರು ಧರ್ಮಕೇತ್ರದ ಜೇಮ್ಸ್ ಡೊಮಿನಿಕ್ ಹಾಗೂ ದೇವಾಲಯದ ಧರ್ಮಗುರುಗಳಾದ ಫಾಧರ್ ಅರುಳ್ ಸೆಲ್ವಕುಮಾರ್ ನೇರವೇರಿಸಿದರು. ಪವಿತ್ರ ಗುರುವಾರ ಕಡೆಯ ಭೋಜನದ ಅಂಗವಾಗಿ ದೇವಾಲಯದಲ್ಲಿ ದಿವ್ಯ ಬಲಿಪೂಜೆಯೊಂದಿಗೆ ಶಿಷ್ಯರ ಪಾದ ತೊಳೆಯುವ ವಿಧಿ ವಿಧಾನ ನಡೆಯಿತು.
ತಾವು ಮರಣ ಹೊಂದುವ ಹಿಂದಿನ ದಿನ ಪ್ರಭುಕ್ರಿಸ್ತರು ಶಿಷ್ಯರ ಪಾದಗಳನ್ನು ತೊಳೆದು ಕಡೆಯ ಭೋಜನವನ್ನು ಸವಿದಿದ್ದ ಸ್ಮರಣೆಯನ್ನು ಮಾಡಲಾಯಿತು. ಮೈಸೂರು ಧರ್ಮಕೇತ್ರದ ಜೇಮ್ಸ್ ಡೊಮಿನಿಕ್, ಅರುಳ್ ಸೆಲ್ವಕುಮಾರ್ ಅವರು ಕ್ರೈಸ್ತ ಬಾಂಧವರ ಪಾದಗಳನ್ನು ತೊಳೆಯುವ ಸಂಪ್ರದಾಯವನ್ನು ನೆರವೇರಿಸಿದರು. ನಂತರ ಮಧ್ಯರಾತ್ರಿಯವರೆಗೆ ವಿಶೇಷ ಪ್ರಾರ್ಥನೆ ನಡೆಯಿತು.
ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಶುಭ ಶುಕ್ರವಾರದ ಅಂಗವಾಗಿ ಕ್ರೈಸ್ತ ಬಾಂಧವರು ಸಂತಮೇರಿ ಶಾಲಾ ಸಭಾಂಗಣದಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು. ಮಧ್ಯಾಹ್ನ ಮರದಿಂದ ತಯಾರಿಸಿದ ಬೃಹತ್ ಶಿಲುಬೆಗಳನ್ನು ಹೊತ್ತು ಸಾಗುವ ಮೂಲಕ ಕ್ರೈಸ್ತನ ಅಂತಿಮ ದಿನದ ಸ್ಮರಣೆಯನ್ನು ಮಾಡಿದರು.
ಸಂತ ಕ್ಲಾರ ಕನ್ಯಾಸ್ತ್ರೀ ಕಾನ್ವೆಂಟಿನ ಕನ್ಯಾಸ್ತ್ರೀಯರು ಹಾಗೂ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಕ್ರೈಸ್ತ ಬಾಂಧವರು ಗುಡ್ ಫ್ರೈಡೇ ಆಚರಣೆಗೆ ಸಾಕ್ಷಿಯಾದರು.










