
ಮಡಿಕೇರಿ NEWS DESK ಮಾ.15 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕಾರಿ ಮಂಡಳಿಯ ಸದಸ್ಯ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಸದಸ್ಯ, ಮಡಿಕೇರಿ ಪುರಸಭೆಯ ಮಾಜಿ ಉಪಾಧ್ಯಕ್ಷ ಹಾಗೂ ಗಾಯಕ ನಗರದ ಹಿಲ್ ರೋಡ್ ನಿವಾಸಿ ಲಿಯಾಕತ್ ಆಲಿ (69) ಅವರು ಇಂದು ಮುಂಜಾನೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರ ಸಂಜೆ ನಗರದ ರಾಣಿಪೇಟೆಯಲ್ಲಿರುವ ಖಬರಸ್ಥಾನದಲ್ಲಿ ನಡೆಯಿತು. ಉತ್ತಮ ಗಾಯಕರಾಗಿದ್ದ ಲಿಯಾಕತ್ ಆಲಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ, ಹಲವು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಿಸಿಕೊಂಡಿದ್ದರು. ನಗರದ ರಾಜಾಸೀಟು ಮಾರ್ಗದ ಬಳಿಯ ಉದ್ಯಾನವನದಲ್ಲಿ ರಾಷ್ಟ್ರ ಕವಿ ಕುವೆಂಪು ಅವರ ಪುತ್ಥಳಿಯ ಸ್ಥಾಪನೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ಬೆಂಬಲಿಗರಾಗಿದ್ದ ಲಿಯಾಕತ್ ಆಲಿ ಹಲವು ವರ್ಷಗಳ ಕಾಲ ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದರು. *ಕಸಾಪ ಸಂತಾಪ* ಸ್ನೇಹಜೀವಿ ಲಿಯಾಕತ್ ಆಲಿ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತೀವ್ರ ಸಂತಾಪ ಸೂಚಿಸಿದೆ. ನಗರದ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನುಡಿನಮನದ ಮೂಲಕ ಗೌರವ ಅರ್ಪಿಸಿತು. ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರು ಮಾತನಾಡಿ ಲಿಯಾಕತ್ ಆಲಿ ಅವರ ಅಗಲಿಕೆ ಸಾಹಿತ್ಯ ಹಾಗೂ ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು. ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್ ಮತ್ತಿತರರು ಮಾತನಾಡಿ ಲಿಯಾಕತ್ ಆಲಿ ಅವರ ಅಗಲಿಕೆಗೆ ಕಂಬನಿ ಮಿಡಿದರು. ಕೊಡಗು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು, ಶ್ರೀ ಓಂಕಾರೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ, ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷೆ ಜುಲೇಕಾಬಿ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಅಲ್ಲಾರಂಡ ರಂಗ ಚಾವಡಿಯ ಸಂಚಾಲಕ ಅಲ್ಲಾರಂಡ ವಿಠಲ್ ನಂಜಪ್ಪ, ಶಿಕ್ಷಕ ಸುಲೇಮಾನ್, ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶ್ವೇತಾ ರವೀಂದ್ರ, ಜಿ.ಸಿ.ಜಗದೀಶ್, ಶೇಕ್ ಅಹಮ್ಮದ್, ಆಪಟ್ಟೀರ ಟಾಟು ಮೊಣ್ಣಪ್ಪ, ಪುಷ್ಪ ಪೂಣಚ್ಚ, ತನು ತಿಮ್ಮಯ್ಯ, ಹಂಸ ಕೊಟ್ಟಮುಡಿ, ಖಾಲಿದ್ ಹಾಕತ್ತೂರು, ಖಲೀಲ್ ಬಾಷಾ, ರವೂಫ್ ಅಹಮ್ಮದ್, ಯಾಕುಬ್, ಜಲೀಲ್ ನಾಪೊಕ್ಲು, ರೈತ್ ಮತ್ತಿತರರು ಉಪಸ್ಥಿತರಿದ್ದು ಪುಷ್ಪ ನಮನ ಸಲ್ಲಿಸಿದರು. ಮಾಜಿ ಸಚಿವ ಎಂ.ಸಿ.ನಾಣಯ್ಯ, ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.









