
ಮಡಿಕೇರಿ NEWS DESK ಮಾ.15 : ನೂರಾರು ವರ್ಷಗಳ ಇತಿಹಾಸವಿರುವ ಕೊಡಗು ಜಿಲ್ಲೆಯ ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರ ವಿಶೇಷ ಆಸಕ್ತಿಯಿಂದ ಯೋಜನೆ ರೂಪಿಸಲಾಗಿದೆ. ಸರಕಾರದಿಂದ ರೂ.1.20 ಕೋಟಿ ಅನುದಾನವನ್ನು ಒದಗಿಸುವ ಮೂಲಕ ಐತಿಹಾಸಿಕ ಹಿನ್ನೆಲೆಯ ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಇಡಲಾಗಿದೆ. ಈ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಗ್ರಾಮೀಣ ಭಾಗದಲ್ಲಿರುವ ಸುಗ್ಗಿ ಕಟ್ಟೆಗಳ ಅಭಿವೃದ್ಧಿಗೆ ತಲಾ 10 ಲಕ್ಷ ಅನುದಾನ ಒದಗಿಸಲಾಗಿದೆ. ನಗರಳ್ಳಿ, ಕೂತಿ, ತೋಳೂರುಶೆಟ್ಟಳ್ಳಿ, ಕುಮಾರಳ್ಳಿ ಬಾಚಳ್ಳಿ, ಶಾಂತಳ್ಳಿ-ತಲ್ತರೆಶೆಟ್ಟಳ್ಳಿ, ಹಾನಗಲ್ಲು ಶೆಟ್ಟಳ್ಳಿ, ಯಡೂರು, ಚೌಡ್ಲು, ಕೊಡ್ಲಿಪೇಟೆ, ದುಂಡಳ್ಳಿ-ಮಾದ್ರೆ, ವಾಲ್ನೂರು-ತ್ಯಾಗತ್ತೂರು, ತಾಕೇರಿ ಸುಗ್ಗಿಕಟ್ಟೆಗಳ ಅಭಿವೃದ್ಧಿಗೆ ತಲಾ 10 ಲಕ್ಷದಂತೆ ಒಟ್ಟು ರೂ 1.20 ಕೋಟಿ ಅನುದಾನ ಮೀಸಲಿಡಲಾಗಿದೆ. ಯಡೂರು ಸುಗ್ಗಿಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಡಾ.ಮಂತರ್ ಗೌಡ ಅವರು ಕಾಮಗಾರಿಗೆೆ ಭೂಮಿಪೂಜೆ ನೆರವೇರಿಸಿದರು. ಸುಗ್ಗಿ ಕಟ್ಟೆಗಳ ಇತಿಹಾಸವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.








