ಕುಶಾಲನಗರ ಏ.8 : ಪ್ರತಿಯೊಬ್ಬರೂ ಜಲಮೂಲಗಳ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಅಧಿಕಾರಿ ಜಿ. ಕೆಂಚಪ್ಪ ಕರೆ ನೀಡಿದ್ದಾರೆ.
ಮಹಾ ಆರತಿ ಬಳಗ ಆಶ್ರಯದಲ್ಲಿ ಸ್ಥಳೀಯ ಗೌರಿ ಗಣೇಶ ದೇವಾಲಯ ಟ್ರಸ್ಟ್ ಸಹಯೋಗದೊಂದಿಗೆ ಜೀವನದಿ ಕಾವೇರಿಗೆ ನಡೆದ 143 ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ನದಿ ತೊರೆಗಳು ಕಲುಷಿತಗೊಳ್ಳದಂತೆ ಎಚ್ಚರವಹಿಸಿ ಸ್ವಚ್ಛವಾಗಿ ಹರಿಯುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಕುಶಾಲನಗರ ಕೊಡವ ಸಮಾಜದ ಅಧ್ಯಕ್ಷರಾದ ಮಂಡೆಪಂಡ ಬೋಸ್ ಮೊಣ್ಣಪ್ಪ ಮಾತನಾಡಿ, ಪಟ್ಟಣ ಗ್ರಾಮಗಳ ತ್ಯಾಜ್ಯಗಳು ನೇರವಾಗಿ ನದಿ ಸೇರಿದಂತೆ ಶಾಶ್ವತ ಯೋಜನೆಗಳು ರೂಪಿಸಬೇಕು. ಆ ಮೂಲಕ ಸ್ವಚ್ಛ ಕಾವೇರಿ ಕನಸು ನನಸಾಗಲು ಸಾಧ್ಯ ಎಂದರು.
ಅರ್ಚಕರಾದ ನೇತೃತ್ವದಲ್ಲಿ ಕುಂಕುಮ ಅರ್ಚನೆ, ಅಷ್ಟೋತ್ತರ ನಂತರ ಸಾಮೂಹಿಕವಾಗಿ ಕಾವೇರಿ ನದಿಗೆ ಮಹಾ ಆರತಿ ಬೆಳಗಲಾಯಿತು. ಗೌರಿ ಗಣೇಶ ದೇವಾಲಯ ಟ್ರಸ್ಟ್ ಅಧ್ಯಕ್ಷರಾದ ಸುಚಿತ್ರ ತಮ್ಮಯ್ಯ, ಮಮತಾ, ಭವಾನಿ, ಹೇಮಾ, ಲಾವಣ್ಯ, ನಿತಿನ್ ಮತ್ತು ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು.