ಮಡಿಕೇರಿ ಏ.8 : ಮಡಿಕೇರಿ ಕನ್ನಡ ಸಾಹಿತ್ಯ ಪರಿಷತ್ತು, ಪುರಾತತ್ವ ಸಂಗ್ರಹಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯಲಿರುವ ‘ಬಣ್ಣ-2023’ ಮಕ್ಕಳ ಬೇಸಿಗೆ ಶಿಬಿರಕ್ಕೆ ದಾಖಲಾತಿ ಆರಂಭಗೊಂಡಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷ ಅಂಬೆಕಲ್ ನವೀನ್ ಹಾಗೂ ರಂಗಮಯೂರಿ ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲ್, ನಗರದ ಜ್ಯೂನಿಯರ್ ಕಾಲೇಜಿನ ಆವರಣದಲ್ಲಿ ಏ.22 ರಿಂದ 30ರ ವರೆಗೆ ಶಿಬಿರ ನಡೆಯಲಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಯೋಗ, ಭಜನೆ, ಯಕ್ಷಗಾನ, ಡ್ರಾಯಿಂಗ್, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ನೃತ್ಯ, ವ್ಯಕ್ತಿತ್ವ ವಿಕಸನ, ಪರಿಸರ ಶಿಕ್ಷಣ, ಜನಪದ ಕಲೆ, ಪ್ರಥಮ ಚಿಕಿತ್ಸೆ, ಅಗ್ನಿ ಅನಾಹುತದ ರಕ್ಷಣೆ, ಜೀವನ ಪ್ರೀತಿ, ಅಭಿನಯ ಇತ್ಯಾದಿ ತರಗತಿಗಳನ್ನು ಆಯಾಯ ಶಿಕ್ಷಕರ ಮಾರ್ಗದರ್ಶನದ ಮುಖಾಂತರ ವಾರಪೂರ್ತಿ ನಡೆಸುತ್ತಿರುತ್ತದೆ ಎಂದು ತಿಳಿಸಿದರು.
ರಾಜ್ಯದ ವಿವಿಧ ಕ್ಷೇತ್ರದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ತರಬೇತಿಗಾಗಿ ಭಾಗವಹಿಸುತ್ತಿದ್ದು, ಹದಿನೇಳು (6-17) ವರ್ಷ ವಯೋಮಿತಿಯ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಕನ್ನಡ ಮಾದ್ಯಮ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ.
ಸುಳ್ಯದಲ್ಲಿ ಮತ್ತು ಮಡಿಕೇರಿಯಲ್ಲಿ ಪ್ರತ್ಯೇಕವಾಗಿ ನಡೆಯುವ ಈ ಶಿಬಿರದಲ್ಲಿ ತರಬೇತುದಾರರೊಂದಿಗೆ ಮಕ್ಕಳು ಒಂದಷ್ಟು ಹೊತ್ತು ತರಬೇತಿಯನ್ನು ಪಡೆಯುವುದರ ಜೊತೆಗೆ, ಮಕ್ಕಳನ್ನು ಒಂದೇ ಕಡೆ ಒಂದೇ ವೇದಿಕೆಯಲ್ಲಿ ಪರಿಚಯಸ್ಥರನ್ನಾಗಿಸಿ ಮನೊಲ್ಲಾಸದಿಂದ ಮನರಂಜಿಸುವಂತೆ ಮಾಡುತ್ತದೆ. ಕಡಿಮೆ ಕಾಲಾವಕಾಶದಲ್ಲಿ ಮಕ್ಕಳಿಗೆ ತರಬೇತಿಯನ್ನು ನೀಡಿ ಕೊನೆಯ ದಿನ ಪ್ರತೀ ಮಗುವೂ ವೇದಿಕೆಯಲ್ಲಿ ಸಾಂಸ್ಕೃತಿಕ ಪ್ರದರ್ಶನಕ್ಕೆ ತಯಾರಾಗುವಂತೆ ಮಾಡುವುದು ವಿಶೇಷ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲೆ, ಸಾಹಿತ್ಯದಲ್ಲಿ ಬಹಳಷ್ಟು ಆಸಕ್ತಿಯ ಜೊತೆಗೆ ಪ್ರತಿಭಾವಂತರಾಗಿರುತ್ತಾರೆ. ಗ್ರಾಮೀಣ ವಿದ್ಯಾರ್ಥಿಗಳಿಗಾಗಿಯೇ ರೂಪುಗೊಂಡ ಶೈಕ್ಷಣಿಕ ಸಂಸ್ಥೆ ರಂಗ ಮಯೂರಿ ಕಲಾಶಾಲೆಯು ವಿದ್ಯಾರ್ಥಿಗಳಿಗೆ ತರಬೇತಿಯ ಜೊತೆಗೆ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸಿ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಸಂಸ್ಥೆಯಾಗಿದೆ ಎಂದರು.
ರಂಗಮಯೂರಿ ಕಲಾಶಾಲೆಯು ವಿದ್ಯಾರ್ಥಿಗಳನ್ನು ಸ್ಥಳೀಯ ವೇದಿಕೆಯ ಜೊತೆಗೆ ಹೊರಗಿನ ರಾಜ್ಯ, ರಾಷ್ಟ್ರಮಟ್ಟದ ವೇದಿಕೆಗಳಲ್ಲೂ ಕಾರ್ಯಕ್ರಮ, ಸ್ಪರ್ಧೆಗಳೊಂದಿಗೆ ವಿಜೇತರಾಗಿಸಿರುವುದನ್ನು ಕಾಣಬಹುದಾಗಿದೆ. ಬೇಸಿಗೆ ರಜೆಯಲ್ಲಿ ವಿದ್ಯಾರ್ಥಿಗಳನ್ನು ಮತ್ತಷ್ಟು ಕ್ರಿಯಾತ್ಮಕವಾಗಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಬೇಸಿಗೆ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದು, ದಾಖಲಾತಿ ಹಾಗೂ ಹೆಚ್ಚಿನ ಮಾಹಿತಿಗೆ 9448005642, 9611355496, 6363783983 ಸಂಪರ್ಕಿಸಬಹುದಾಗಿದೆ.