ಮಡಿಕೇರಿ ಏ.9 : ಪೋಷಕರು ಮಕ್ಕಳಿಗೆ ಹಾಕಿ ಕ್ರೀಡೆಯಲ್ಲಿ ಒಲವು ಮೂಡಿಸುವ ಮೂಲಕ ಪ್ರೋತ್ಸಾಹಿಸಬೇಕು, ಆ ಮೂಲಕ ಭವಿಷ್ಯದ ದಿನಗಳಲ್ಲಿ ಕೊಡಗಿನಿಂದ ಹೆಚ್ಚು ಮಂದಿ ಆಟಗಾರರು ಭಾರತ ಹಾಕಿ ತಂಡವನ್ನು ಪ್ರತಿನಿಧಿಸುವಂತಾಗಬೇಕು ಎಂದು ಭಾರತ ಹಾಕಿ ತಂಡದ ಮಾಜಿ ನಾಯಕ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತ, ಒಲಿಂಪಿಯನ್ ಧನ್‌ರಾಜ್ ಪಿಳ್ಳೆ ಕರೆ ನೀಡಿದರು.
ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿತ 23ನೇ ವರ್ಷದ ಕೊಡವ ಕೌಟುಂಬಿಕ ‘ಅಪ್ಪಚೆಟ್ಟೋಳಂಡ ಕಪ್ ಹಾಕಿ ನಮ್ಮೆ 2023’ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒಂದು ಕಾಲದಲ್ಲಿ ಭಾರತ ಹಾಕಿ ತಂಡದಲ್ಲಿ 8ರಿಂದ 10 ಮಂದಿ ಕೊಡಗಿನ ಆಟಗಾರರು ಇರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಈ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಅವರು ವಿಷಾಧಿಸಿದರು. ಮಕ್ಕಳು, ಯುವಕರಲ್ಲಿ ಹಾಕಿ ಕ್ರೀಡೆಯ ಬಗ್ಗೆ ಆಸಕ್ತಿ ಮೂಡಿಸಲು ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಸಹಕಾರಿಯಾಗಿದೆ. ಇಂತಹ ಕ್ರೀಡಾಕೂಟಗಳಿಂದ ಮತ್ತಷ್ಟು ಯುವ ಹಾಕಿಪಟುಗಳು ರಾಜ್ಯ ಮತ್ತು ರಾಷ್ಟ್ರವನ್ನು ಪ್ರತಿನಿಧಿಸುವಂತಾಗಲಿ ಎಂದು ಆಶಿಸಿದರು. ಎಂ.ಎಂ ಸೋಮಯ್ಯ, ಎಂ.ಪಿ ಗಣೇಶ್, ಎ.ಬಿ ಸುಬ್ಬಯ್ಯ ಅವರಂತಹ ಅನೇಕ ಅತ್ಯುತ್ತಮ ಆಟಗಾರರನ್ನು ಕೊಡಗು ಜಿಲ್ಲೆ ಭಾರತ ಹಾಕಿ ತಂಡಕ್ಕೆ ನೀಡಿದೆ ಎಂದು ಧನ್‌ರಾಜ್ ಪಿಳ್ಳೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತ ಹಾಕಿ ತಂಡದ ಮತ್ತೋರ್ವ ಮಾಜಿ ನಾಯಕ, ಓಲಂಪಿಯನ್ ಜಾ಼ಫರ್ ಇಕ್ಬಾಲ್ ಮಾತನಾಡಿ, ಕೊಡವ ಕೌಟುಂಬಿಕ ಹಾಕಿ ಉತ್ಸವ ವಿಶ್ವ ದಾಖಲೆ ಬರೆದಿದೆ. 300ಕ್ಕೂ ಹೆಚ್ಚು ಕೊಡವ ಕುಟುಂಬಗಳು ಪಾಲ್ಗೊಂಡು ಆಟವಾಡುವ ಕ್ರೀಡಾ ಕೂಟವನ್ನು ವೀಕ್ಷಿಸಲು ಇದೇ ಮೊದಲ ಬಾರಿಗೆ ಕೊಡಗಿಗೆ ಬಂದಿರುವುದು ಸಂತೋಷ ತಂದಿದೆ ಎಂದರು. ಹಾಕಿಯನ್ನು ತಳಮಟ್ಟದಿಂದ ಬೆಳೆಸುವಲ್ಲಿ ಇಂತಹ ಕ್ರೀಡಾಕೂಟಗಳು ಸಹಕಾರಿಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮತ್ತಷ್ಟು ಇಂತಹ ಕ್ರೀಡಾ ಕೂಟಗಳು ಆಯೋಜಿಸುವಂತಾಗಬೇಕು ಎಂದು ಜಾಫರ್ ಇಕ್ಬಾಲ್ ಅಭಿಪ್ರಾಯಪಟ್ಟರು.
ಒಲಿಂಪಿಯನ್ ಎ.ಬಿ ಸುಬ್ಬಯ್ಯ ಮಾತನಾಡಿ, ಅಪ್ಪಚೆಟ್ಟೋಳಂಡ ಕುಟುಂಬ ಅತ್ಯುತ್ತಮವಾಗಿ ಪಂದ್ಯಾವಳಿ ಆಯೋಜಿಸಿದ್ದು, ಹೆಮ್ಮೆ ತಂದಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ ಆಟಗಾರರು ಕಾರ್ಯಕ್ರಮಕ್ಕೆ ಆಗಮಿಸಿರುವುದು ಪಂದ್ಯಾವಳಿಯ ಗೌರವ ಹೆಚ್ಚಿಸಿದೆ ಎಂದು ಹೇಳಿ ಪಂದ್ಯಾಟಕ್ಕೆ ಶುಭಕೋರಿದರು.
ಏರ್ ಮಾರ್ಷಲ್ ಬಲ್ಟಿಕಾಳಂಡ ಯು. ಚೆಂಗಪ್ಪ ಮಾತನಾಡಿ, ಕೊಡವರನ್ನು ಒಗ್ಗೂಡಿಸುವ ಮತ್ತು ಜಿಲ್ಲೆಯಲ್ಲಿ ಹಾಕಿ ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 1997ರಲ್ಲಿ ಪಾಂಡಂಡ ಕುಟ್ಟಪ್ಪ ಅವರು ಮೊಟ್ಟ ಮೊದಲ ಬಾರಿಗೆ ಪಂದ್ಯಾಟ ಆರಂಭಿಸಿದ್ದರು. ಇಂದು ಪ್ರತಿಯೋರ್ವರೂ ಪಾಂಡಂಡ ಕುಟ್ಟಪ್ಪ ಅವರನ್ನು ಸ್ಮರಿಸಬೇಕಿದೆ. ಅಂದು ಕುಟ್ಟಪ್ಪ ಅವರು ಬಿತ್ತಿದ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಶ್ಲಾಘಿಸಿದರು. 336 ಕುಟುಂಬಗಳು ಪಾಲ್ಗೊಳ್ಳುವ ಅತಿ ದೊಡ್ಡ ಟೂರ್ನಿಯಾಗಿ ಬೆಳೆದಿರುವ ಕೊಡವ ಕುಟುಂಬಗಳ ಕೌಟುಂಬಿಕ ಹಾಕಿ ಉತ್ಸವದ ಮೂಲಕ ಇನ್ನಷ್ಟು ಕ್ರೀಡಾಪಟುಗಳು ಭಾರತ ತಂಡವನ್ನು ಪ್ರತಿನಿಧಿಸುವಂತಾಗಲಿ ಎಂದರು.
ಅಪ್ಪಚೆಟ್ಟೋಳಂಡ ಹಾಕಿ ನಮ್ಮೆಯ ಕುರಿತು ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ, ಒಲಿಂಪಿಯನ್ ಚೆಪ್ಪುಡಿರ ಪೂಣಚ್ಚ ಅವರುಗಳು ಮಾತನಾಡಿ, ಪಂದ್ಯಾಟಕ್ಕೆ ಶುಭ ಹಾರೈಸಿದರು.
ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮವನ್ನು ಅಪ್ಪಚೆಟ್ಟೋಳಂಡ ಕುಟುಂಬದ ಪಟ್ಟೆದಾರರಾದ ಅಪ್ಪಚೆಟ್ಟೋಳಂಡ ಮಿಟ್ಟು ಈರಪ್ಪ, ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಪಾಂಡಂಡ ಲೀಲಾ ಕುಟ್ಟಪ್ಪ, ಏರ್ ಮಾರ್ಷಲ್ ಬಲ್ಟಿಕಾಳಂಡ ಯು.ಚೆಂಗಪ್ಪ ಉದ್ಘಾಟಿಸಿದರು. ಭಾರತ ಹಾಕಿ ತಂಡದ ಕೋಚ್ ಡೇವಿಡ್ ಜಾನ್, ಧನ್‌ರಾಜ್ ಪಿಳ್ಳೆ ಸಹೋದರಿ ಸಮಿಕ್ಷಾ ಸಿಂಗ್, ಜಾಫರ್ ಇಕ್ಬಾಲ್ ಪತ್ನಿ ಫೌಜಿಯಾ ಇಕ್ಬಾಲ್, ಅಪ್ಪಚೆಟ್ಟೋಳಂಡ ಹಾಕಿ ನಮ್ಮೆಯ ಸಂಚಾಲಕ ಮನು ಮುತ್ತಪ್ಪ, ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ಅಪ್ಪಚೆಟ್ಟೋಳಂಡ ಕುಟುಂಬದ ಪ್ರಮುಖರು ವೇದಿಕೆಯಲ್ಲಿದ್ದರು.
::: ತೆರೆದ ಜೀಪ್‌ನಲ್ಲಿ ಮೆರವಣಿಗೆ :::
ಭಾರತ ಹಾಕಿ ದಂತಕಥೆಗಳೆಂದೇ ಕರೆಯಲ್ಪಡುವ ಓಲಂಪಿಯನ್‌ಗಳಾದ ಧನ್‌ರಾಜ್ ಪಿಳ್ಳೆ, ಜಾಫರ್ ಇಕ್ಬಾಲ್ ಸೇರಿದಂತೆ ಅಂತರರಾಷ್ಟ್ರೀಯ ತೀರ್ಪುಗಾರ ಬಿ.ಜೆ ಕಾರ್ಯಪ್ಪ, ಭಾರತ ಹಾಕಿ ತಂಡದ ಕೋಚ್ ಡೇವಿಡ್ ಜಾನ್, ಒಲಿಂಪಿಯನ್ ಅಂಜಪರವಂಡ ಸುಬ್ಬಯ್ಯ ಅವರನ್ನು ಮೈದಾನದಲ್ಲಿ ತೆರೆದ ಜೀಪ್‌ನಲ್ಲಿ ಮೆರವಣಿಗೆ ನಡೆಸಿ ಗೌರವಿಸಲಾಯಿತು. ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿದ್ದ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಅಧ್ಯಕ್ಷ ಮನು ಮತ್ತಪ್ಪ ನೇತೃತ್ವದಲ್ಲಿ ಮೆರವಣಿಗೆಯನ್ನು ಮುನ್ನಡೆಸಿದರು. ಸಹಸ್ರಾರು ಸಂಖ್ಯೆಯಲ್ಲಿದ್ದ ಕ್ರೀಡಾ ಪ್ರೇಮಿಗಳು ಓಲಂಪಿಯನ್‌ಗಳಿಗೆ ಕರತಾಡನ ಮಾಡುವ ಮೂಲಕ ತಮ್ಮ ಗೌರವ ಸಮರ್ಪಿಸಿದರು. ಇದೇ ಸಂದರ್ಭ ಮುಂದಿನ ವರ್ಷದ ಪಂದ್ಯಾಟದ ಜವಾಬ್ದಾರಿ ವಹಿಸಿಕೊಂಡಿರುವ ಕುಂಡ್ಯೋಳಂಡ ಕುಟುಂಬಸ್ಥರು ಮೈದಾನದಲ್ಲಿ ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ಮೆರವಣಿಗೆ ಸಾಗಿ ಎಲ್ಲಾ ಕೊಡವ ಕುಟುಂಬಗಳ ಬೆಂಬಲ ಕೋರಿದರು. ಪೇರೂರು ಕಲಾ ತಂಡ ಮತ್ತು ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿ ಬಂತು.
::: 40 ಸಾವಿರ ವೀಕ್ಷಕರು :::
ಫೈನಲ್ ಪಂದ್ಯವನ್ನು ವೀಕ್ಷಿಸಲು ಜಿಲ್ಲೆಯ ಮೂಲೆ ಮೂಲೆಗಳಿಂದ ಅಂದಾಜು 40 ಸಾವರಿ ಮಂದಿ ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಏಕಕಾಲಕ್ಕೆ 25 ಸಾವಿರ ಮಂದಿ ಕುಳಿತ ಪಂದ್ಯಾಟ ವೀಕ್ಷಿಸಲು ಅನುಕೂಲವಾಗುವಂತೆ ಗ್ಯಾಲರಿಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಪಂದ್ಯಾಟದ ಆಯೋಜಕರು ನಿರೀಕ್ಷೆಗೂ ಮೀರಿ ಮೈದಾನದ ಗ್ಯಾಲರಿ ಕ್ರೀಡಾ ಪ್ರೇಮಿಗಳಿಂದ ತುಂಬಿ ಹೋಗಿತ್ತು. ಮಹಿಳೆಯರು, ಮಕ್ಕಳು, ವಯೋವೃದ್ದರ ಸಹಿತ ಯುವಕ ಯುವತಿಯರು ಪಂದ್ಯಾಟ ವೀಕ್ಷಿಸಿದರು. ಯುವಕರ ತಂಡಗಳ ಸುಮಧುರ ಕೊಳಲು ವಾದನ ಸಹಿತ ದೇಸಿ ಬ್ಯಾಂಡ್ ಸೆಟ್‌ಗಳು ಪಂದ್ಯಾಟಕ್ಕೆ ಕಳೆ ತುಂಬಿದ್ದವು. ಮಾಳೇಟಿರ ಶ್ರೀನಿವಾಸ್ ಮತ್ತು ಚೆಪ್ಪುಡಿರ ಕಾರ್ಯಪ್ಪ ಅವರ ವೀಕ್ಷಕ ವಿವರಣೆ ಪಂದ್ಯಾಟದ ವೀಕ್ಷಕರನ್ನು ಸೆಳೆಯುವಲ್ಲಿ ಸಫಲವಾಯಿತು.
Breaking News
- *ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೆಗ್ಗಳಕ್ಕೆ ಸುವರ್ಣ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ*
- *ನ.19 ರಂದು ಮಡಿಕೇರಿ ತಲುಪಲಿರುವ ಮದ್ರಾಸ್ ಎಂಜಿನಿಯರಿಂಗ್ ಆರ್ಮಿ ಗ್ರೂಪ್ನ ಬೈಕ್ ರ್ಯಾಲಿ*
- *ಫೀ.ಮಾ.ಕಾರ್ಯಪ್ಪ ಕಾಲೇಜ್ ನಲ್ಲಿ ಕನಕದಾಸ ಜಯಂತಿಯ ಅರ್ಥಪೂರ್ಣ ಆಚರಣೆ : ದಾಸ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಕನಕದಾಸರು : ಮೇಜರ್ ಡಾ.ರಾಘವ ಶ್ಲಾಘನೆ*
- *ನ.21 ರಂದು ಮಡಿಕೇರಿಯಲ್ಲಿ ರಕ್ತದಾನ ಮತ್ತು ಕಣ್ಣು ತಪಾಸಣಾ ಶಿಬಿರ*
- *ಮಡಿಕೇರಿಯಲ್ಲಿ ವಕೀಲರ ಕ್ರೀಡಾಕೂಟ : ಕ್ರೀಡಾ ಸ್ಫೂರ್ತಿ ಜೀವನಕ್ಕೂ ಸ್ಫೂರ್ತಿಯಾಗಲಿ : ಶಾಸಕ ಡಾ.ಮಂತರ್ ಗೌಡ*
- ಕನಾ೯ಟಕ ಪ್ಲಾಂಟಸ್೯ ಅಸೋಸಿಯೇಷನ್ ನ ವಾಷಿ೯ಕ ಸಮ್ಮೇಳನ : ಕಾಫಿ ಕೃಷಿಕರ ನೆರವಿಗೆ ಸಕಾ೯ರ ಧಾವಿಸಬೇಕು : ಮ್ಯಾಥ್ಯು ಅಬ್ರಾಹಂ*
- *ಡಾ.ಸೂರ್ಯ ಕುಮಾರ್ ಅವರ “ಮಂಗಳಿ” ಪುಸ್ತಕ ಬಿಡುಗಡೆ*
- *ಸಿದ್ದಾಪುರದಲ್ಲಿ ನೃತ್ಯ ಸಂಭ್ರಮ : ಗಮನ ಸೆಳೆದ ನೃತ್ಯ ವೈಭವ*
- *ಎಸ್.ಕೆ.ಎಸ್.ಎಸ್.ಎಫ್ ವಿರಾಜಪೇಟೆ ವಲಯ ಇಸ್ಲಾಮಿಕ್ ಕಲೋತ್ಸವ : ವಿರಾಜಪೇಟೆ ಯೂನಿಟ್ ಚಾಂಪಿಯನ್*
- *ಸುಂಟಿಕೊಪ್ಪ : ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ*