ಮಡಿಕೇರಿ ಏ.10 : ವಿದ್ಯಾರ್ಥಿಗಳು ಸಾರ್ವಜನಿಕ ಸಭೆ ಮತ್ತು ವೇದಿಕೆಗಳಲ್ಲಿ ಮುಕ್ತವಾಗಿ ಮಾತನಾಡುವ ನಾಯಕತ್ವದ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಅಭಿಪ್ರಾಯಪಟ್ಟರು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ಉದ್ಯೋಗ ಕೋಶ ಸಮಿತಿ ಹಾಗೂ ಜೆಸಿಐ ಪೊನ್ನಂಪೇಟೆ ನಿಸರ್ಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪರಿಣಾಮಕಾರಿ ಭಾಷಣ ಕಲೆ ಮತ್ತು ಸಂಸತ್ತಿನ ನಡವಳಿ ಕುರಿತ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವದ ಗುಣ ಮತ್ತು ಪ್ರತಿಭಟಿಸುವ ಮನೋಭಾವವನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕೆಂದು ತಿಳಿಸಿದರು. ಪ್ರಸಕ್ತ ರಾಜಕೀಯದ ಕುರಿತು ಜ್ಞಾನ ಪಡೆದುಕೊಂಡು ಸಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜೆ ಸಿ ಐ ಪೊನ್ನಂಪೇಟೆ ನಿಸರ್ಗದ ಅಧ್ಯಕ್ಷರಾದ ನೀತ್ ಅಯ್ಯಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಸಮಾಜದ ಕಲ್ಯಾಣಕ್ಕಾಗಿ ನಮ್ಮ ಸಂಸ್ಥೆಯು ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ರಾಷ್ಟ್ರದ ಏಳಿಗೆಗೆ ನಿರಂತರವಾಗಿ ಶ್ರಮಿಸುತ್ತಿದೆ. ಸಮಾಜ ಸೇವೆಯೇ ನಮ್ಮ ಗುರಿಯಾಗಿದ್ದು ಇಂತಹ ಮತ್ತಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಜೆ ಸಿ ಐ ನ ಕಾರ್ಯದರ್ಶಿ ಶರತ್ ಸೋಮಣ್ಣ ಮತ್ತು ಕಾಲೇಜಿನ ಉದ್ಯೋಗ ಕೋಶ ಸಮಿತಿಯ ಸಂಚಾಲಕ ಆರ್.ರಘುರಾಜ್ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಜೆ ಸಿ ಐ ಇಂಡಿಯಾದ ಪ್ರಧಾನ ತರಬೇತುದಾರ ಸಂದೀಪ್ ವಿಜಯನ್ “ಪರಿಣಾಮಕಾರಿ ಭಾಷಣ ಕಲೆ ಮತ್ತು ಸಂವಹನ ಕೌಶಲ್ಯ” ಕುರಿತು ತರಬೇತಿ ನೀಡಿದರು.
ತರಬೇತುದಾದರಾದ ರಾಜೀವ್ “ನಾಯಕತ್ವದ ಗುಣ ಮತ್ತು ಸಂಸತ್ತಿನ ಸಭಾ ನಡಾವಳಿ” ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.