ಮಡಿಕೇರಿ ಏ.10 : ಕರ್ನಾಟಕ ರಾಜ್ಯದ ರೈತರ ಜೀವನಾಡಿಯಾಗಿರುವ ಕೆಎಂಎಫ್ ನಂದಿನಿಯನ್ನು ಅಮೂಲ್ ನೊಂದಿಗೆ ಯಾವುದೇ ಕಾರಣಕ್ಕು ವಿಲೀನ ಮಾಡಬಾರದು ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಬಿ.ಎನ್.ಮುದ್ದುರಾಜು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಗುಜರಾತ್‌ನ ಅಮುಲ್ ಸಂಸ್ಥೆ ನಂದಿನಿಯನ್ನು ಅತಿಕ್ರಮಿಸಿಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರ ನೆರವು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.
ಗೋ ಬ್ಯಾಕ್ ಅಮೂಲ್ ಅಭಿಯಾನದ ಮೂಲಕ ರಾಜ್ಯದ ರೈತರು ಹಾಗೂ ಜನರು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹೋರಾಟಕ್ಕೆ ಕಾಂಗ್ರೆಸ್ ಪಕ್ಷ ಕೂಡ ಬೆಂಬಲ ನೀಡಲಿದೆ ಎಂದು ತಿಳಿಸಿದ್ದಾರೆ.
ಬೆಲೆ ಏರಿಕೆಯ ದುಬಾರಿ ಜೀವನದ ಈ ದಿನಗಳಲ್ಲಿ ಆರ್ಥಿಕತೆಯನ್ನು ಸರಿದೂಗಿಸಲು ರೈತರು ಕೃಷಿಯೊಂದಿಗೆ ಹಸುಗಳನ್ನು ಸಾಕಾಣಿಕೆ ಮಾಡಿ ಹಾಲು ಮಾರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಥೇಚ್ಚವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಲಭ್ಯತೆ ಇದ್ದರೂ ಸರ್ಕಾರ ಕೃತಕ ಕೊರತೆಯನ್ನು ಸೃಷ್ಟಿಸುತ್ತಿದೆ. ಗುಜರಾತ್ ನ ಸಂಸ್ಥೆಗೆ ಲಾಭ ಮಾಡಿಕೊಡಲು ಕರ್ನಾಟಕದ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರ ರೈತರ ನೋವುಗಳಿಗೆ ಸ್ಪಂದಿಸುತ್ತಿಲ್ಲ. ಕೊಡಗಿನಲ್ಲಿ ಹುಲಿ ದಾಳಿಗೆ ಸಿಲುಕಿ ನೂರಾರು ಹಸುಗಳು ಬಲಿಯಾಗಿವೆ. ಅತಿವೃಷ್ಟಿಯ ಸಂದರ್ಭ ಹಲವು ಜಾನುವಾರುಗಳು ಬೀದಿಪಾಲಾಗಿವೆ. ಹೈನುಗಾರಿಕೆಗೆ ಉತ್ತೇಜನ ನೀಡುವ ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ. ರೈತರ ಬೆನ್ನೆಲುಬಾಗಿರುವ ಕೆಎಂಎಫ್ ಗೆ ಕೊಡಗು ಜಿಲ್ಲೆಯಿಂದಲೂ ಅನೇಕರು ಹಾಲು ನೀಡುತ್ತಾರೆ. ಆದರೆ ಅಮೂಲ್ ನೊಂದಿಗೆ ವಿಲೀನದ ಪ್ರಸ್ತಾಪದಿಂದ ರೈತರಿಗೆ ಆಘಾತವಾಗಿದೆ. ಇದೆಲ್ಲವೂ ರೈತರ ಬಗ್ಗೆ ಸರ್ಕಾರ ತೋರಿರುವ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.










