ಮಡಿಕೇರಿ ಏ.12 : ಪ್ರಾದೇಶಿಕ ಭಾಷಾ ಚಲನಚಿತ್ರಗಳಿಗೆ ಸರ್ಕಾರದಿಂದ ಕೊಡಮಾಡುವ ಸಹಾಯಧನ ಮತ್ತು ಪ್ರಶಸ್ತಿಗಳನ್ನು ಪಡೆಯುವ ಏಕಮಾತ್ರ ಉದ್ದೇಶದಿಂದ ಕೊಡವ ಭಾಷಾ ಚಲನಚಿತ್ರಗಳನ್ನು ನಿರ್ಮಿಸುವ ಕ್ರಮವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡವ ಭಾಷಾ ಚಲನಚಿತ್ರ ನಿರ್ದೇಶಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಭಾಷಾ ಬೆಳವಣಿಗೆಗೆ ಪೂರಕವಾಗಿ ಕೊಡವ ಭಾಷೆಯ ಚಲನಚಿತ್ರಗಳನ್ನು ನಿರ್ಮಿಸಬೇಡಿ ಎನ್ನುವುದಿಲ್ಲ. ಆದರೆ, ಇಲ್ಲಿನ ಮೂಲ ಸಂಸ್ಕೃತಿಗಳ ಅರಿವಿಲ್ಲದೆ, ಕೇವಲ ಕೊಡವ ಭಾಷೆ ಆಧರಿಸಿ ನಿರ್ಮಿಸುವ ಚಲನಚಿತ್ರಗಳು ಹೊರ ಜಗತ್ತಿಗೆ ಕೊಡವ ಸಮುದಾಯದ ಬಗ್ಗೆ ತಪ್ಪು ಭಾವನೆಗಳನ್ನು ಮೂಡಿಸುತ್ತದೆ ಎಂದು ಹೇಳಿದರು.
ಪ್ರಾದೇಶಿಕ ಭಾಷಾ ಎರಡು ಚಲನಚಿತ್ರಗಳಿಗೆ ವಾರ್ಷಿಕ 18 ರಿಂದ 20 ಲಕ್ಷ ರೂ. ಸಹಾಯಧನವನ್ನು ಸರ್ಕಾರ ಒದಗಿಸುತ್ತದೆ. ಇದನ್ನು ಪಡೆಯುವ ಏಕಮಾತ್ರ ಉದ್ದೇಶದಿಂದ ಚಲನಚಿತ್ರಗಳನ್ನು ನಿರ್ಮಿಸುವುದು ಮತ್ತು ಪ್ರಶಸ್ತಿಗಾಗಿ ಲಾಬಿ ನಡೆಸುವ ಪಕ್ರಿಯೆಗಳು ಇಂದು ನಡೆಯುತ್ತಿದೆ. ಇಂತಹ ಚಿತ್ರಗಳು ಸೆನ್ಸಾರ್ ಮಂಡಳಿಯ ಮುಂದೆ ಬಂದಾಗ ಅದು ಯೋಗ್ಯವೇ ಅಲ್ಲವೇ ಎಂದಬುದನ್ನು ನಿರ್ಧರಿಸಲು ಕೊಡವ ಭಾಷೆಯ ತಜ್ಞರುಗಳು ಅಲ್ಲಿರುವುದಿಲ್ಲ. ಇದರಿಂದ ಅರ್ಹವಲ್ಲದ ಚಲನಚಿತ್ರಗಳು ಪ್ರಶಸ್ತಿಯನ್ನು , ಸಹಾಯಧನವನ್ನು ಪಡೆಯುವಂತಾಗುತ್ತಿದ್ದು, ಇದರಿಂದ ಕೊಡವ ಭಾಷೆಯ ಮೇಲೆ ಅಭಿಮಾನವಿಟ್ಟು ಚಲನಚಿತ್ರದಲ್ಲಿ ತೊಡಗಿಸಿಕೊಂಡ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊಡವ ಭಾಷಾ ಚಲನಚಿತ್ರಗಳು ಕೊಡಗಿನಲ್ಲಿ 1972 ರಿಂದ ನಿರ್ಮಾಣಗೊಳ್ಳಲು ಆರಂಭಿಸಿತು. 2010 ರವರೆಗೆ ಚಲನಚಿತ್ರ ನಿರ್ಮಾಣ ಕುಂಟುತ್ತಾ ಸಾಗಿತ್ತಾದರೆ, ಪ್ರಸ್ತುತ ವಾರ್ಷಿಕ 4 ರಿಂದ 5 ಕೊಡವ ಭಾಷಾ ಚಲನಚಿತ್ರಗಳು ನಿರ್ಮಾಣವಾಗುತ್ತಿದೆ. ಇದರ ನಡುವೆ ಕೆಲ ಕೊಡವ ಭಾಷಾ ಚಲನಚಿತ್ರಗಳು ಸಾರ್ವಜನಿಕ ಪ್ರದರ್ಶನಕ್ಕೆ ಬಾರದೆ ಪ್ರಶಸ್ತಿ, ಸಹಾಯಧನವನ್ನು ಪಡೆಯುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕಪಡಿಸಿದರು.
‘ಚಲನ ಚಿತ್ರ ಒಕ್ಕೂಟ’ ರಚನೆ ಚಿಂತನೆ- ಕೊಡವ ಭಾಷಾ ಚಲನಚಿತ್ರಗಳನ್ನು ಅತ್ಯಂತ ಕಾಳಜಿ ವಹಿಸಿ, ಸಾಕಷ್ಟು ಸಮಯ ವಿನಿಯೋಗಿಸಿ ನಿರ್ಮಿಸುವ ಸಾಕಷ್ಟು ನಿರ್ದೇಶಕರು, ನಿರ್ಮಾಪಕರು , ಕಲಾವಿದರು ಇತ್ತೀಚಿನ ಬೆಳವಣಿಗೆಗಳಿಂದ ಸಾಕಷ್ಟು ನೊಂದಿದ್ದಾರೆ. ಈ ಹಿನ್ನೆಲೆ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ‘ಚಲನ ಚಿತ್ರ ಒಕ್ಕೂಟ’ವನ್ನು ರಚಿಸಲು ಉದ್ದೇಶಿಸಲಾಗಿದೆ. ಇದೇ ಏ.20 ರ ನಂತರ ಈ ಸಂಬಂಧ ಸಭೆಯೊಂದನ್ನು ನಡೆಸಲಾಗುತ್ತದೆಂದು ಮಾಹಿತಿ ನೀಡಿದರು.
ನಿರ್ದೇಶಕ ಆಚೆಯಡ ಗಗನ್ ಗಣಪತಿ ಮಾತನಾಡಿ, ಕೊಡವ ಚಲನಚಿತ್ರವೊಂದನ್ನು ತಿಂಗಳಾನುಗಟ್ಟಲೆ ಪರಿಶ್ರಮ ಪಟ್ಟು ನಿರ್ಮಿಸಲಾಗುತ್ತದೆ. ಆದರೆ, ಬೆರಳೆಣಿಕೆಯ ದಿನಗಳಲ್ಲಿ ಚಿತ್ರವೊಂದನ್ನು ನಿರ್ಮಿಸಿ ಪ್ರಶಸ್ತಿ, ಸಹಾಯಧನಕ್ಕೆ ಲಾಬಿ ಮಾಡಲಾಗುತ್ತಿದೆಯೆಂದು ಆರೋಪಿಸಿದರು.
ನಿರ್ಮಾಪಕ ಹಾಗೂ ನಿರ್ದೇಶಕರಾದ ಕಾಳಿಮಾಡ ದಿನೇಶ್ ನಾಚಪ್ಪ ಮಾತನಾಡಿ, ಸಾರ್ವಜನಿಕ ಪ್ರದರ್ಶನವನ್ನೇ ಕಾಣದ ಪ್ರಾದೇಶಿಕ ಭಾಷಾ ಚಲನ ಚಿತ್ರಗಳಿಗೆ ಬೆಂಗಳೂರಿನ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವಕಾಶ ನೀಡಲಾಗುತ್ತದೆ ಮತ್ತು ಪ್ರಶಸ್ತಿಗೂ ಪರಿಗಣಿಸಲಾಗುತ್ತದೆಂದು ಬೇಸರ ವ್ಯಕ್ತಪಡಿಸಿದರು.
ಕಲಾವಿದೆ ಮಂಡೀರ ಪದ್ಮಾ ಬೋಪಯ್ಯ ಮಾತನಾಡಿ, ಕೊಡವ ಭಾಷಾ ಸಂಸ್ಕೃತಿಯ ಪರಿಜ್ಞಾನವಿಲ್ಲದೆ, ಕೇವಲ ಭಾಷೆಯನ್ನು ಬಳಸಿ ನಿರ್ಮಿಸುವ ಚಲನಚಿತ್ರಗಳು ಹೊರ ಜಗತ್ತಿಗೆ ಕೊಡವ ಸಮುದಾಯದ ಬಗ್ಗೆ ತಪ್ಪು ಭಾವನೆ ಮೂಡಲು ಕಾರಣವಾಗುತ್ತದೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಾಚಮಾಡ ಕರುಂಬಯ್ಯ ಉಪಸ್ಥಿತರಿದ್ದರು.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*