ಮಡಿಕೇರಿ ಏ.12 : ಸಾಹಿತಿ ಪರದಂಡ ಚಂಗಪ್ಪ ಅವರ ಜನ್ಮದಿನಾಚರಣೆ ಪ್ರಯುಕ್ತ ಅಲ್ಲಾರಂಡ ರಂಗಚಾವಡಿ ವತಿಯಿಂದ ಸ್ಪರ್ಧಾತ್ಮಕ ಲೇಖನವನ್ನು ಆಹ್ವಾನಿಸಲಾಗಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಗಚಾವಡಿಯ ಸಂಸ್ಥಾಪಕ ಅಲ್ಲಾರಂಡ ವಿಠಲ ನಂಜಪ್ಪ, ಪರಂದಡ ಚಂಗಪ್ಪ ಅವರ ಸಾಧನೆಯ ನೆನಪಿಗಾಗಿ ಪ್ರತೀ ಹುಟ್ಟುಹಬ್ಬದ ದಿನದಂದು ಕೊಡಗು ಮತ್ತು ಕೊಡವ ಚರಿತ್ರೆ ಪರಂಪರೆಗಳ ಬಗ್ಗೆ ಯುವರಲ್ಲಿ ಮತ್ತು ಅಧ್ಯಕ್ಷಯಶೀಲರಿಗೆ ಉತ್ಸಾಹ ಮತ್ತು ಪ್ರೋತ್ಸಾಹ ತುಂಬುವ ನಿಟ್ಟಿನಲ್ಲಿ ಪ್ರತೀ ವರ್ಷ ಚಾರಿತ್ರಿಕ ಹಿನ್ನೆಲೆಯ ಕಾರ್ಯಕ್ರಮ, ಶಾಲಾ, ಕಾಲೇಜಿ ಮಕ್ಕಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಅವರ ಪುಸ್ತಕಗಳ ವಿಮರ್ಶಾತ್ಮಕ ಬರಹಗಳು ಇತ್ಯಾದಿ ಕಾರ್ಯಕ್ರಮಗಳನ್ನು ಅಲ್ಲಾರಂಡ ರಂಗಚಾವಡಿ ಕೈಗೆತ್ತಿಕೊಂಡು ಕಾರ್ಯಪ್ರವೃತ್ತವಾಗಿದೆ ಎಂದು ಮಾಹಿತಿ ನೀಡಿದರು.
ಸಾಹಿತಿ ಪರದಂಡ ಚಂಗಪ್ಪ ಅವರ ಪುಸ್ತಕಗಳ ಬಗ್ಗೆ ಕೊಡಗಿನ ಸಾಹಿತಿಗಳಿಂದ ವಿಮರ್ಶನಾ ಲೇಖನಗಳು, ನಾ ಬಲ್ಲಂತೆ ಪರದಂಡ ಚಂಗಪ್ಪ ಎಂಬ ವಿಷಯದ ಕುರಿತು ಲೇಖನ ಆಹ್ವಾನಿಸಲಾಗಿದ್ದು, ಆಸಕ್ತರು ಏ.30ರ ಒಳಗೆ vtl.coorg@gmail.com ಗೆ ಕಳುಹಿಸುವಂತೆ ತಿಳಿಸಿದರು.
ಆಯ್ಕೆಯಾದ ಪ್ರತೀ ಮೂರು ಲೇಖನಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು ಎಂದ ಅವರು, ಚಂಗಪ್ಪ ಸಂಸ್ಮರಣಾ ದಿನಾಚರಣೆಯಂದು ವಿಶೇಷ ಉಪನ್ಯಾಸ, ಆಯ್ಕೆಯಾದ ಬರಹಗಾರರಿಂದ ವಿಚಾರ ವಾಚನ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ ಎಂದರು.
ಮುಂದಿನ ದಿನಗಳಲ್ಲಿ ಚಂಗಪ್ಪ ಅವರ ಹೆಸರಿನಲ್ಲಿ ನಿರಂತರ ಚುಟುವಟಿಕೆಯನ್ನು ನಡೆಸಲು ಪರ್ಯಾಯ ವ್ಯವಸ್ಥೆಯನ್ನು ನಡೆಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ, ಪ್ರಮುಖರಾದ ಡಾ. ನಡಿಕೇರಿಯಂಡ ಪೂವಯ್ಯ ಉಪಸ್ಥಿತರಿದ್ದರು.









