ನಾಪೋಕ್ಲು ಏ.13 : ಯವಕಪಾಡಿ ಗ್ರಾಮದ ಶ್ರೀ ಪನ್ನಂಗಾಲತ್ತಮ್ಮೆ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.
ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಸಮೀಪವಿರುವ ಅಮ್ಮಂಗೇರಿಯಲ್ಲಿ ಶ್ರೀ ದೇವಿಯ ದೇವತಾ ಕೆಲಸಕ್ಕೆ ನಿಯೋಜಿಸಲ್ಪಟ್ಟ ಕಣಿಯ ಜನಾಂಗದವರು ಶುದ್ಧ, ಶ್ರದ್ಧಾಭಕ್ತಿಯಿಂದ ಓಲೆ (ತಾಳೆ ಜಾತಿ ಸೇರಿದ ಮರದ ಗರಿ) ಯಲ್ಲಿ ತಯಾರಿಸಿದ ಎರಡು ಕೊಡೆಗಳನ್ನು ದೈವ ದರ್ಶನ ಹಾಗೂ ಎತ್ತೇರಾಟ, ತಕ್ಕ ಮುಖ್ಯಸ್ಥರು, ಭಕ್ತಾದಿಗಳೊಂದಿಗೆ ಪನ್ನಂಗಾಲತ್ತಮ್ಮೆ ದೇವಸ್ಥಾನಕ್ಕೆ ತರಲಾಯಿತು.
ಈ ಕೊಡೆಯಲ್ಲಿ ಪನ್ನಂಗಾಲ ತಮ್ಮೆ ನೆಲೆಸಿರುವಳೆಂದೂ, ಅಣ್ಣನ ಮನೆಯಿಂದ ಅವಳನ್ನು ತನ್ನ ಮನೆಗೆ ಕರೆತರಲಾಗುವ ಪದ್ಧತಿ ಇದೆಂಬ ನಂಬಿಕೆ ಗ್ರಾಮಸ್ಥರಲ್ಲಿ ಮತ್ತು ಭಕ್ತರಲ್ಲಿದೆ.
ಅಣ್ಣನನ್ನು(ಇಗ್ಗುತ್ತಪ್ಪ) ಬಿಟ್ಟು ಹೋಗಲು ಮನಸ್ಸಿಲ್ಲದ ತಂಗಿಯು ಮಾರ್ಗ ಮಧ್ಯೆ ಸಿಗುವ (ಮೊದಲ ಬಾರಿಗೆ ಜನರಿಗೆ ಬೆಳ್ಳಕ್ಕಿ ರೂಪದಲ್ಲಿ ದರ್ಶನ ನೀಡಿದಳೆಂದು ಹೇಳಲಾದ) ಭತ್ತದ ಗದ್ದೆಯಿಂದ ಹಿಂತಿರುಗಿ ಹೋಗಲು ಯತ್ನಿಸುವ ದೃಶ್ಯ ಭಕ್ತರನ್ನು ರೋಮಾಂಚನಗೊಳಿಸುತ್ತದೆ.
ಹಿಂತಿರುಗಲು ಪ್ರಯತ್ನಿಸುವ ಕೊಡೆಯನ್ನು ತಡೆ ಹಿಡಿಯಲು ಎರಡು ಜನ (ಅದಕ್ಕೆಂದೆ ಶುದ್ಧ ನಿಷ್ಠೆಯಿಂದ ಇರುವವರು) ಕೊಡೆಗೆ ಜೋಡಿಸಿದ ಬಿದಿರನ್ನು ನೆಲಕ್ಕೆ ಒತ್ತಿ ಹಿಡಿದಿದ್ದರೂ ಆ ಕೊಡೆಯು ಗರ್ರ ನೆ ಸುತ್ತುವುದು ಮತ್ತು ಮೇಲಕ್ಕೆ ಎಳೆಯಲು ಪ್ರಯತ್ನಿಸುವುದು ಶ್ರೀ ಪನ್ನಂಗಾಲತಮ್ಮೆ ದೇವಿಯ ಮಹಿಮೆ ಎನ್ನಲಾಗಿದ್ದು ಈ ಅಪೂರ್ವ ಕ್ಷಣವನ್ನು ವೀಕ್ಷಿಸಲು ಊರ ಹಾಗೂ ಪರ ಊರಿನ ನೂರಾರು ಮಂದಿ ಗದ್ದೆಯ ಬಯಲಿನಲ್ಲಿ ನೆರೆದಿದ್ದರು.
ಹಬ್ಬದ ಆರಂಭದಿಂದಲೂ ದೇವಿಯ ಅಣ್ಣವಾದ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳದಿಮದ ತೀರ್ಥ ಪ್ರಸಾದ ತರುವ ಸಂಪ್ರದಾಯವಿದ್ದು ಹಬ್ಬ ನಡೆಯುವ ದಿನ ಅಣ್ಣ ದುಃಖ ತಪ್ತನಾಗಿರುವ ಸನ್ನಿವೇಶ ಎಂಬಂತೆ ಪಾಡಿ ಇಗ್ಗುತ್ತಪ್ಪ ದೇವರ ಆದಿ ಸ್ಥಳ ಮಲ್ಮ ಬೆಟ್ಟ ಮೋಡಗಳಿಂದ ಕೂಡಿರುತ್ತದೆ ಎಂಬ ನಂಬಿಕೆ ಗ್ರಾಮಸ್ಥರಲ್ಲಿದೆ.ಇಲ್ಲಿ ಎರಡು ವರ್ಷಕ್ಕೊಮ್ಮೆ ದೊಡ್ಡ ಹಬ್ಬ ಜರುಗಲಿದ್ದು ಪ್ರಸಕ್ತ ವರ್ಷ ದೊಡ್ಡಹಬ್ಬ ವಿಜೃಂಭಣೆಯಿಂದ ಜರುಗಿತು.ಇನ್ನಿತರ ಆಚರಣೆಗಳು ನಾಳೆ ಏಪ್ರಿಲ್ 13 ರಂದು ದೈವಿಕ ವಿಧಿವಿಧಾನಗಳು ನಡೆಯಲಿವೆ
ವರದಿ : ದುಗ್ಗಳ ಸದಾನಂದ.