ಮಡಿಕೇರಿ ಏ.13 : ಚುನಾವಣೆಯನ್ನು ಸಮರ್ಪಕವಾಗಿ ನಿಭಾಯಿಸುವ ಸಲುವಾಗಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ವಯಲ ಅಧ್ಯಕ್ಷರುಗಳಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇತೃತ್ವದಲ್ಲಿ ಪ್ರಚಾರ ಸಮಿತಿ ಸಹಯೋಗದಲ್ಲಿ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದ ಆರು ಬ್ಲಾಕ್‍ನ 273 ಮತಗಟ್ಟೆಯ ಪದಾಧಿಕಾರಿಗಳಿಗೆ, ವಯಲ ಅಧ್ಯಕ್ಷರುಗಳಿಗೆ ಕೆಪಿಸಿಸಿಯ ನುರಿತ ತರಬೇತುದಾರರಿಂದ ಕಾರ್ಯಾಗಾರ ನಡೆಯಲಿದೆ ಎಂದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಹಂತದಲ್ಲಿ ಕಾರ್ಯಾಗಾರ ನಡೆಯಲಿದ್ದು, ಏ.15 ರಂದು ಬೆಳಿಗ್ಗೆ 10 ಗಂಟೆಗೆ ಪೊನ್ನಂಪೇಟೆ ಬ್ಲಾಕ್‍ನ ಗೋಣಿಕೊಪ್ಪ ಪರಿಮಳ ಕಲ್ಯಾಣ ಮಂಟಪ, ಮಧ್ಯಾಹ್ನ 12.30ಕ್ಕೆ ವಿರಾಜಪೇಟೆ ಬ್ಲಾಕ್‍ನ ಅಭ್ಯರ್ಥಿ ಕಚೇರಿ ಹಾಗೂ 3.30ಕ್ಕೆ ನಾಪೋಕ್ಲು ಬ್ಲಾಕ್‍ನ ಕಾರುಗುಂದ ವಿಎಸ್‍ಎಸ್ ಸಭಾಂಗಣದಲ್ಲಿ ಪೊನ್ನಂಪೇಟೆಯಲ್ಲಿ 96 ಮತಗಟ್ಟೆ, ವಿರಾಜಪೇಟೆಯ 94 ಮತಗಟ್ಟೆ, ನಾಪೋಕ್ಲುವಿನ 83 ಮತಗಟ್ಟೆಯ ಪದಾಧಿಕಾರಿಗಳಿಗೆ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು.
ಮೂರು ಬ್ಲಾಕಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಪಕ್ಷದ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಹಾಗೂ ವಿವಿಧ ಘಟಕಗಳ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ ಎಂದ ಅವರು, ಎರಡನೇ ಹಂತದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಡಿಕೇರಿ, ಕುಶಾಲನಗರ, ಸೋಮವಾರಪೇಟೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಚುನಾವಣೆಯನ್ನು ಸಮರ್ಪಕವಾಗಿ ಎದುರಿಸಲು ಮತ್ತು ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ವ್ಯವಸ್ಥಿತವಾಗಿ ಆರು ಬ್ಲಾಕ್‍ನಲ್ಲಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ನಿರ್ಧರಿಸಲಾಗಿದ್ದು, ಆಯಾ ವ್ಯಾಪ್ತಿಯ ಮತದಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
::: ಕಾಂಗ್ರೆಸ್ ಸಮಾವೇಶ :::
ಏ.17 ರಂದು ಮಡಿಕೇರಿ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್ ಗೌಡ ಚುನಾವಣಾ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದ ಅವರು, ಅಂದು ನಗರದ ಗಾಂಧಿ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಯಲಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಕೆಪಿಸಿಸಿ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಏ.18 ರಂದು ಬೆಳಿಗ್ಗೆ 11.30ಕ್ಕೆ ವಿರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ವಿರಾಜಪೇಟೆಯ ಸೆರಿನಿಟಿ ಸಭಾಂಗದಲ್ಲಿ ಪರಿಶಿಷ್ಟ ಜಾತಿ ವಿಭಾಗದ ಬೃಹತ್ ಸಮಾವೇಶ ನಡೆಯಲಿದ್ದು, ಪೊನ್ನಂಪೇಟೆ, ನಾಪೋಕ್ಲು, ವಿರಾಜಪೇಟೆಯ ಎಲ್ಲಾ ಬ್ಲಾಕಿನ, ವಲಯ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ವಿರಾಜಪೇಟೆ ಕ್ಷೇತ್ರದಲ್ಲಿ ಸಂಭ್ರಮದ ವಾತಾವರಣವಿದ್ದು, ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ ಬಾರಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಾಪೋಕ್ಲು ಬ್ಲಾಕ್ ಪ್ರಚಾರ ಸಮಿತಿ ಸಂಯೋಜಕ ಬೊಳ್ಳಂಡ ಶರಿ ಗಿರೀಶ್, ಪೊನ್ನಂಪೇಟೆ ಕ್ಷೇತ್ರದ ಪ್ರಚಾರ ಸಮಿತಿಯ ಮತ್ರಂಡ ಡಿಲ್ಲು, ವಿರಾಜಪೇಟೆ ಕ್ಷೇತ್ರದ ಪ್ರಚಾರ ಸಮಿತಿ ಸಂಯೋಜಕ ಕೊಲ್ಯದ ಗಿರೀಶ್ ಹಾಗೂ ಬ್ಲಾಕ್ ಪ್ರಚಾರ ಸಮಿತಿ ಸದಸ್ಯ ಹನೀಫ್ ಪಟ್ಟಿಯೋಡ ಉಪಸ್ಥಿತರಿದ್ದರು.









