ಮಡಿಕೇರಿ ಏ.13 : ಕೊಡಗು ಜಿಲ್ಲೆಯಲ್ಲಿ ನಿರಂತರ ಶೋಷಣೆಗೆ ತುತ್ತಾಗುತ್ತಿರುವ ಮತ್ತು ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಶೋಷಿತ ಸಮುದಾಯಗಳು ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲು ಅಥವಾ ಎರಡೂ ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಏ.14 ರಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೊಗೇರ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ತಿಳಿಸಿದ್ದಾರೆ.
ಇಂದು ಸುಂಟಿಕೊಪ್ಪದ ಮೊಗೇರ ಸಮಾಜದ ಪ್ರಧಾನ ಕಚೇರಿಯಲ್ಲಿ ವಿವಿಧ ಸಂಘಟನೆಗಳ ಹಾಗೂ ಸಮುದಾಯಗಳ ಸಭೆ ನಡೆಸಿದ ನಂತರ ಮಾತನಾಡಿದ ಅವರು ಶುಕ್ರವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಿಸಿದ ನಂತರ ನೊಂದವರ ಪರವಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಕೊಡಗಿನ ಮೊಗೇರ ಸಮುದಾಯ, ಕೊಡಗು ಶೋಷಿತ ಸಮುದಾಯಗಳ ವೇದಿಕೆ, ಬಹುಜನ ಕಾರ್ಮಿಕ ಸಂಘಟನೆಗಳು, ದಲಿತ ಮುಖಂಡರುಗಳು ಹಾಗೂ ಕೊಡಗಿನಲ್ಲಿ ನಿರಂತರ ಶೋಷಣೆಗೆ ಒಳಪಟ್ಟ ಇತರೆ ಸಮುದಾಯಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಶೋಷಿತ ಸಮುದಾಯಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅನೇಕ ಹೋರಾಟಗಳನ್ನು ನಡೆಸಿವೆ. ಅಹೋರಾತ್ರಿ ಧರಣಿ ಮತ್ತು ಉಪವಾಸ ಸತ್ಯಾಗ್ರಹಗಳನ್ನು ನಡೆಸಿ ನಿವೇಶನ ಹಾಗೂ ಮೂಲಭೂತ ಸೌಲಭ್ಯಗಳಿಗಾಗಿ ಅಂಗಲಾಚಿದರೂ ಸರ್ಕಾರ, ಜನಪ್ರತಿನಿಧಿಗಳು ಅಥವಾ ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಶೋಷಿತರ ಕೂಗು ಅರಣ್ಯರೋಧನವಾಗಿದೆ ಎಂದು ಆರೋಪಿಸಿದರು.
ಪ್ರತಿಬಾರಿ ಚುನಾವಣೆ ನಡೆದಾಗಲೂ ಮತ ಚಲಾಯಿಸುವುದಷ್ಟೇ ನಮ್ಮ ಕೆಲಸವಾಗಿ ಬಿಟ್ಟಿದೆ. ಇದರಿಂದ ಶೋಷಿತ ಸಮುದಾಯಗಳಿಗೆ ಯಾವುದೇ ಲಾಭವಾಗುತ್ತಿಲ್ಲ. ಆದ್ದರಿಂದ ಚುನಾವಣೆ ಬಹಿಷ್ಕಾರಕ್ಕೆ ಅಥವಾ ನಮ್ಮೊಳಗೆ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಒತ್ತಡಗಳು ಕೇಳಿ ಬಂದಿದೆ ಎಂದು ಗೌತಮ್ ಶಿವಪ್ಪ ತಿಳಿಸಿದರು.
ಸುಂಟಿಕೊಪ್ಪದ ಮೊಗೇರ ಸಮಾಜದ ಪ್ರಧಾನ ಕಚೇರಿಯಲ್ಲಿ ಪ್ರಮುಖರ ಸಭೆ ನಡೆಯಲಿದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ಬಹುಜನ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಹೆಚ್.ಎಸ್.ಮುತ್ತಪ್ಪ, ಕೊಡಗು ಕಾರ್ಮಿಕ ಸಂಘಟನೆಗಳ ಮುಖಂಡ ಭರತ್ ಕುಮಾರ್, ಶೋಷಿತ ಸಮುದಾಯಗಳ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ್, ಮುಖಂಡರುಗಳಾದ ಪ್ರೇಮಕುಮಾರ್, ಜಯಕುಮಾರ್, ಪ್ರೇಮಕೃಷ್ಣಪ್ಪ, ಕುಸುಮ, ಮೋನಿಷ, ಪಿ.ಕೆ.ಸುಂದರ, ಎಂ.ರಾಜು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.









