ಮಡಿಕೇರಿ ಏ.14 : ಇಂದಿನ ಯುವ ಸಮೂಹ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ನಾಯಕತ್ವ ಗುಣವನ್ನು ರೂಢಿಸಿಕೊಂಡರೆ, ಸಂವಿಧಾನದ ಹಿತಾಸಕ್ತಿಯಂತೆ ಸಮಾನ, ಸಹೋದರತ್ವ, ಸಾಮರಸ್ಯದಿಂದ ಕೂಡಿದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಮಹದೇವಯ್ಯ ಅಭಿಪ್ರಾಯಪಟ್ಟರು.
ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 132 ನೇ ಜನ್ಮ ಜಯಂತಿಯಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತೀಯ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಮಹಾನ್ ಕೊಡುಗೆಯನ್ನು ವಿವರಿಸಿದರು. ಅಂಬೇಡ್ಕರ್ ಅವರಿಗೆ ಅಷ್ಟೊಂದು ಅರ್ಹತೆಯಿದ್ದರೂ ಅವರಿಗೆ ಉನ್ನತ ಜವಾಬ್ದಾರಿಯನ್ನು ಒದಗಿಸಲು ಸತಾಹಿಸಿದ ಮನಸ್ಥಿತಿಗಳ ನಡುವೆಯೂ ಅವರು ಜನಸಾಮ್ಯರ ಒಳಿತಿಗಾಗಿ ಕಠಿಣ ಪರಿಶ್ರಮದಿಂದ ಈ ದೇಶದ ಉಜ್ವಲ ಭವಿಶ್ಯಕ್ಕಾಗಿ ಅಡಿಪಾಯ ಹಾಕಿಕೊಟ್ಟಿದ್ದಾರೆ ಎಂದರು.
ಅಂಬೇಡ್ಕರ್ ಅವರ ಜೀವನ, ಸಾಧನೆಯ ಕುರಿತು ವಿಶ್ವದಾದ್ಯಂತ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ನಡೆಯುತ್ತಿದ್ದು, ಭಾರತೀಯರಿಗಿಂತ ವಿದೇಶಿಯರು ಅಂಬೇಡ್ಕರ್ ಅವರ ಕುರಿತು ಹೆಚ್ಚೆಚ್ಚು ತಿಳಿದುಕೊಳ್ಳುತ್ತಿದ್ದಾರೆ ಎಂದರು. ಭಾರತದಲ್ಲಿ ಪ್ರತೀಯೊಂದು ಮಹಿಳೆಗೂ ಸಮಾನ ನ್ಯಾಯ ದೊರಕುತ್ತಿದೆ ಎಂದರೆ ಅದಕ್ಕೆ ಕಾರಣ ಅಂಬೇಡ್ಕರ್ ಅವರ ಕೊಡುಗೆ. ಭಾರತೀಯ ರಿಸರ್ವ್ ಬ್ಯಾಂಕ್ ಮುಖಾಂತರ ಆರ್ಥಿಕತೆ ಸುಧಾರಿಸಿಕೊಳ್ಳುತ್ತಿದೆ ಎಂದರೆ ಅದಕ್ಕೆ ರೂವಾರಿ ಡಾ. ಅಂಬೇಡ್ಕರ್. ಭಾಕ್ರಾ ನಂಗಲ್ ಸೇರಿದಂತೆ, ಭಾರತದಲ್ಲಿ ಬೃಹತ್ ಅಣೆಕಟ್ಟುಗಳ ಮುಖಾಂತರ ಸಾಕಷ್ಟು ರಾಜ್ಯಗಳು ಇಂದು ಪ್ರವಾಹದಿಂದ ತಪ್ಪಿಸಿ ಕೃಷಿಯಲ್ಲಿ ಸಾಧನೆ ತೋರುತ್ತಿದೆ ಎಂದರೆ ಅದಕ್ಕೆ ರೂಪುರೇಶೆ ಸಿದ್ಧಪಡಿಸಿದ್ದು ಕೂಡ ಡಾ. ಬಿ.ಆರ್. ಅಂಬೇಡ್ಕರ್. ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ನಮ್ಮ ದೇಶದ ಎರಡು ಮಹಾನ್ ರತ್ನಗಳು ಇಂದು ವಿಶ್ವ ನಾಯಕರಾಗಿ ಗುರುತಿಸಿಕೊಂಡಿದ್ದು, ಅವರಿಬ್ಬರ ಸಮಾಜಮುಖಿ ಜೀವನ ವಿಶ್ವದೆಲ್ಲೆಡೆ ಎಂದೆಂದಿಗೂ ಪ್ರಸ್ತುತ ಎಂದು ತಿಳಿಸಿದರು.
ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ನಾಯಕ ಅಂತಿಮ ಕಲಾ ವಿಭಾಗದ (ಕೆಜೆಎಸ್) ವಿದ್ಯಾರ್ಥಿ ಪಿ.ಟಿ.ಪ್ರತೀಕ್. ಡಾ. ಅಂಬೇಡ್ಕರ್ ಅವರು ಬಾಲ್ಯದಿಂದ ಶೋಷಣೆಯನ್ನು ಅನುಭವಿಸಿ ಕಠಿಣ ಜೀವನವನ್ನು ಎದುರಿಸಿ ಸರ್ವರ ಒಳಿತಿಗಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಿ ಇಂದು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ರಾಘವ. ಬಿ, ಶಾಂತಿಯುತ ಹೋರಾಟದಿಂದ ಕಾನೂನಾತ್ಮಕ ಸುಧಾರಣೆಗಳಿಂದ ಪ್ರಜಾಪ್ರಭುತ್ವದ ಯಶಸ್ಸಿಗೆ ಅಡಿಪಾಯ ಹಾಕಿಕೊಟ್ಟ ಕೀರ್ತಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.
ಮತದಾನವೆಂಬುದು ಮಹಾ ದೊಡ್ಡ ಅಸ್ತ್ರ ಅದರ ಮುಖಾಂತರ ನಿರಂಕುಶ ವ್ಯವಸ್ಥೆಯನ್ನು ಕಿತ್ತೊಗೆಯಬೇಕೆಂದು ಅಂಬೇಡ್ಕರ್ ಹೇಳಿರುವ ಮಾತನ್ನು ನಾವೆಲ್ಲರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಸ್ವಾಗತ ಕೋರಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಹಿಂದಿ ವಿಭಾಗದ ಮುಖ್ಯಸ್ಥ ತಳವಾರ ಅವರು, ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರು ಎಂಬ ಮಾತು ಎಲ್ಲರಿಗೂ ಸ್ಪೂರ್ತಿದಾಯಕವಾದುದು. ಅಂಬೇಡ್ಕರ್ ಅವರ ಜೀವನ-ಸಾಧನೆ, ಬರಹ-ಭಾಷಣ, ಚಿಂತನೆಗಳನ್ನು ಓದಿ ಮೈಗೂಡಿಸಿಕೊಂಡರೆ, ಅಂಬೇಡ್ಕರ್ ಅವರಂತೆಯೇ ಸಮಾಜಕ್ಕೆ ದಾರಿದೀಪವಾಗಬಹುದು ಎಂದರು.
ವೇದಿಕೆಯಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ಗಾಯತ್ರಿ, ಗಣಿತ ವಿಭಾಗದ ಮುಖ್ಯಸ್ಥರು ಹಾಗೂ ಐಕ್ಯುಎಸಿ ಮುಖ್ಯಸ್ಥರಾದ ಡಾ. ರಾಜೇಂದ್ರ, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಇಸಿಸಿಸಿ ಸಂಯೋಜಕರಾದ ಡಾ. ರೇಣುಶ್ರಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.