ನಾಪೋಕ್ಲು ಏ.15 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಏರ್ಪಡಿಸಲಾಗಿರುವ ಬೇಸಿಗೆ ಶಿಬಿರದ ಪ್ರಯುಕ್ತ ಶಿಬಿರಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ ನಡೆಯಿತು.
ಪಟ್ಟಣದ ಮುಖ್ಯ ಬೀದಿಯಲ್ಲಿ ನಡೆದ ಜಾಥದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಶ್ರೀರಾಮ ಟ್ರಸ್ಟ್ ಹಾಗೂ ಅಂಕುರ್ ಪಬ್ಲಿಕ್ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಅಂಕುರ್ ಶಾಲೆಯ ಆಕರ್ಷಕ ಬ್ಯಾಂಡ್ ಸೆಟ್ ನೊಂದಿಗೆ ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು. ಮತದಾನ ನಮ್ಮ ಹಕ್ಕು, ಮತವನ್ನು ಮಾರಿಕೊಳ್ಳಬೇಡಿ, 18ಕ್ಕಿಂತ ಹೆಚ್ಚಿನ ವಯಸ್ಕರು ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಿ ಎಂಬ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು.
ಮಾನವ ಸರಪಳಿ ರಚಿಸಿ ಜನ ಜಾಗೃತಿ ಮೂಡಿಸಲಾಯಿತು. ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾದ ಶಿವಣ್ಣ, ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ, ಖಜಾಂಚಿ ಗಂಗಮ್ಮ , ಕೆಪಿಎಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಎ.ಹ್ಯಾರಿಸ್, ಸ್ಕೌಟ್ ಮಾಸ್ಟರ್ ಮಹೇಶ್, ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಶಿಕ್ಷಕಿ ಲೀಲಾವತಿ ಹಾಗೂ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ವೃಂದ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ








