ಮಡಿಕೇರಿ ಏ.15 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾ ದಳದ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರು ಇಂದು ನಾಮಪತ್ರ ಸಲ್ಲಿಸಿದರು.
ಪಕ್ಷದ ಪ್ರಮುಖರೊಂದಿಗೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಮುತ್ತಪ್ಪ ಅವರು, ಮಡಿಕೇರಿ ಕ್ಷೇತ್ರದ ಚುನಾವಣಾಧಿಕಾರಿ ಡಾ.ಯತೀಶ್ ಉಲ್ಲಾಳ್ ಅವರಿಗೆ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ಯುವ ಮುಖಂಡ ಸಿ.ಎಲ್.ವಿಶ್ವ ಸೇರಿದಂತೆ ಹಲವು ಪ್ರಮುಖರು ಈ ಸಂದರ್ಭ ಹಾಜರಿದ್ದರು.
::: ಸೋಮವಾರ ‘ಬಿ’ ಫಾರಂ :::
ನಾಮಪತ್ರ ಸಲ್ಲಿಕೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾಪಂಡ ಮುತ್ತಪ್ಪ, ತನ್ನನ್ನು ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರಿಗೆ ಕೃತಜ್ಞತೆ ಸಲ್ಲಿಸಿ, ಪಕ್ಷದಿಂದ ‘ಬಿ’ ಫಾರಂ ಇನ್ನಷ್ಟೆ ದೊರಕಬೇಕಿದ್ದು, ಸೋಮವಾರ ಚುನಾವಣಾಧಿಕಾರಿಗಳಿಗೆ ‘ಬಿ’ ಫಾರಂ ಸಲ್ಲಿಸುವುದಾಗಿ ತಿಳಿಸಿದರು.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಷೇತ್ರದಲ್ಲಿ ಯಾವುದೇ ಪಕ್ಷ ಪ್ರಬಲ ದುರ್ಬಲ ಎಂಬುದಿಲ್ಲ. ಇದೆಲ್ಲ ನಿರ್ಧಾರವಾಗುವುದು ಮತ ಎಣಿಕೆಯ ಸಂದರ್ಭ ಮಾತ್ರ. ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿರುವುದಾಗಿ ಸ್ಪಷ್ಟಪಡಿಸಿದರು.
::: ಗೆಲುವಿಗೆ ಯೋಜನೆ :::
ತಾನೊಬ್ಬ ಕಾರ್ಮಿಕ ಸಂಘಟನೆಗಳ ಮುಖಂಡನಾಗಿ ತಳಮಟ್ಟದಿಂದ ದಶಕಗಳಿಂದ ಕಾರ್ಯನಿರ್ವಹಿಸಿಕೊಂಡು ಬಂದವನು. ಸಂಘÀಟನೆ ಹೇಗೆ ಮಾಡಬೇಕೆಂಬುದನ್ನು ಅರಿತಿದ್ದೇನೆ. ಜೆಡಿಎಸ್‍ನಲ್ಲಿ ಪಕ್ಷಕ್ಕಾಗಿ ದುಡಿಯುವ ಪ್ರಾಮಾಣಿಕ ಕಾರ್ಯಕರ್ತರಿದ್ದು, ಜೆಡಿಎಸ್ ಗೆಲುವಿಗೆ ಉತ್ತಮ ಯೋಜನೆಗಳನ್ನು ರೂಪಿಸಿ ಕೊಂಡಿರುವುದಾಗಿ ಹೇಳಿದರು
::: ಮೆರವಣಿಗೆ :::
ನಾಮಪತ್ರ ಸಲ್ಲಿಕೆಗೂ ಮುನ್ನ ನಾಪಂಡ ಮುತ್ತಪ್ಪ ಅವರು ನಗರದ ಎ.ವಿ ಶಾಲೆಯ ಬಳಿಯಿಂದ ಗಾಂಧಿ ಮೈದಾನದವರೆಗೆ ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರು.












