ಮಡಿಕೇರಿ ಏ.15 : ಸಿರಿಗನ್ನಡ ವೇದಿಕೆ ಕೊಡಗು ಹಾಗೂ ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ಪದಗ್ರಹಣ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆಯಿತು.
ಸಿರಿಗನ್ನಡ ವೇದಿಕೆ ಮಡಿಕೇರಿ ತಾಲೂಕು ಅಧ್ಯಕ್ಷೆ, ಸಾಹಿತಿ, ನಿರ್ಮಾಪಕಿ, ನಟಿ ಈರಮಂಡ ಹರಿಣಿ ವಿಜಯ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿರಿಗನ್ನಡ ವೇದಿಕೆಯ ರಾಜ್ಯ ಸಮಿತಿ ಕಾರ್ಯಾಧ್ಯಕ್ಷೆ ಡಾ.ಸೌಗಂಧಿಕಾ ವಿ.ಜೋಯಿಸ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನಂತರ ಮಾತನಾಡಿದ ಅವರು ಸಂಘಟನೆಗಳಲ್ಲಿ ಹುದ್ದೆ ಮುಖ್ಯವಲ್ಲ, ಸಲ್ಲಿಸುವ ಸೇವೆ ಮುಖ್ಯ. ನಾವು ಮಾಡುವ ಜನಸೇವೆ ಶಾಶ್ವತವಾಗಿರುತ್ತದೆ ಎಂದರು.
ಹಿರಿಯ ಕವಿಗಳು, ಸಾಹಿತಿಗಳನ್ನು ನೆನಪಿಸಿಕೊಂಡು ಅವರುಗಳ ಬರಹಗಳನ್ನು ಓದಬೇಕು; ಮೌಲ್ಯಯುತ ಬರಹಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದು ಹೇಳಿದರು.
ಕಾರ್ಯಕ್ರಮ ಉದ್ಘಾಟನೆ ಮಾಡಿದ ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ಮೋಹನ್ ಅಪ್ಪಾಜಿ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಉತ್ತಮ ಸಾಹಿತಿಗಳಿದ್ದಾರೆ. ಅವರುಗಳ ಮಾರ್ಗದರ್ಶನದೊಂದಿಗೆ ಇನ್ನೂ ಹೆಚ್ಚಿನ ಸಾಹಿತಿಗಳು ಮುಂದೆ ಬರಬೇಕು. ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.
ತೂಕ್‍ಬೊಳಕ್ ಪತ್ರಿಕೆ ಸಂಪಾದಕ ಮುಲ್ಲೇಂಗಡ ಮಧೋಶ್ ಪೂವಯ್ಯ ಮಾತನಾಡಿ, ಕನ್ನಡ ಭಾಷೆ ಹೃದಯದ ಭಾಷೆಯಾಗಬೇಕು. ಕೊಡಗು ಸಾಹಿತ್ಯ ಕ್ಷೇತ್ರಕ್ಕೆ ಕನ್ನಡದ ಕೊಡುಗೆ ದೊಡ್ಡದು. ಸಾಹಿತಿಗಳಿಂದ ಇನ್ನಷ್ಟು ಕೃತಿಗಳು ಹೊರಬರಲಿ, ಸಂಘಟನೆಯಿಂದ ಸಾಹಿತ್ಯಕ್ಕೆ, ಸಮಾಜಕ್ಕೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳುವಂತಾಗಲಿ ಎಂದು ಹೇಳಿದರು.
ಶಕ್ತಿ ದಿನಪತ್ರಿಕೆ ಹಿರಿಯ ಉಪ ಸಂಪಾದಕ, ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಕುಡೆಕಲ್ ಸಮತೋಷ್ ಮಾತನಾಡಿ, ಒಂದು ಕಾಲದಲ್ಲಿ ಸಾಹಿತ್ಯದಲ್ಲಿ ಬರಡು ಎಂದು ಹೇಳಲಾಗುತ್ತಿದ್ದ ಕೊಡಗು ಜಿಲ್ಲೆಯಲ್ಲಿ ಇಂದು ಹಿರಿಯ ಸಾಹಿತಿಗಳೊಂದಿಗೆ ಉದಯೋನ್ಮುಖ, ಕಿರಿಯ ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ಕಾಲಿಡುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ. ಹಲವಷ್ಟು ಪುಸ್ತಕಗಳನ್ನು ಕೊಡುಗೆಯಾಗಿ ಕೊಡುತ್ತಿರುವದು ಶ್ಲಾಘನೀಯ ವಿಚಾರ. ಆದರೆ, ಸಾಹಿತಿಗಳು ಬರೆದಂತಹ ಪುಸ್ತಕಗಳನ್ನು ಓದಿದರೆ ಮಾತ್ರ ಲೇಖಕರ ಪ್ರಯತ್ನ, ಶ್ರಮ ಸಾರ್ಥಕವಾಗಲಿದೆ ಎಂದು ಹೇಳಿದರು.
ಸಾಹಿತ್ಯ ಕ್ಷೇತ್ರ ಬೆಳವಣಿಗೆ ಸಾಧಿಸಲಿ, ಸಿರಿಗನ್ನಡ ವೇದಿಕೆಯಿಂದ ಇನ್ನಷ್ಟು ಉತ್ತಮ ಕಾರ್ಯಗಳು ಮೂಡಿಬರಲಿ ಎಂದು ಆಶಿಸಿದರು.
ಅಲ್ಲಾರಂಡ ರಂಗಚಾವಡಿ ಹಾಗೂ ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಅಲ್ಲಾರಂಡ ವಿಠಲನಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕವಿಗೋಷ್ಠಿ : ಶಿವರಾತ್ರಿ ಅಂಗವಾಗಿ ಶಿವನ ಕುರಿತು ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕವಿಗಳು ಗೋಷ್ಠಿಯಲ್ಲಿ ಕವನ ವಾಚನ ಮಾಡಿದರು. ಕಿಗ್ಗಾಲು ಎಸ್.ಗಿರೀಶ್, ಪಿ.ಎಸ್.ವೈಲೇಶ್, ಕೆ.ಜಿ.ರಮ್ಯಾ, ಕುಕ್ಕುನೂರು ರೇಷ್ಮಾ ಮನೋಜ್, ಎಲಿಜಬೆತ್ ಲೋಬೋ, ಕೆ.ಶೋಭಾ ರಕ್ಷಿತ್, ಗೀತಾಂಜಲಿ ಅರುಣ್, ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಕವನ ವಾಚನ ಮಾಡಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪಂಚಭಾಷಾ ಸಾಹಿತಿ, ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಉಳುವಂಗಡ ಕಾವೇರಿ ಉದಯ ಮಾತನಾಡಿ, ಕವಿ ಹೃದಯ ಸೂಕ್ಷ್ಮಮ ವಾಗಿರುತ್ತದೆ, ಕವಿ ಭಾವನೆಗಳಲ್ಲಿ ಮೂಡಿಬರುವ ಸಾಲುಗಳು ಅಮೂಲ್ಯವಾದುದು. ಉತ್ತಮ ಸಂದೇಶಗಳ ಸಹಿತ ಕವನ ರಚನೆ ಮಾಡುತ್ತಾರೆ. ಅಂತಹ ಕವನಗಳು ಇಂದಿನ ಗೋಷ್ಠಿಯಲ್ಲಿ ಕವಿ ಮನಸುಗಳಿಂದ ವ್ಯಕ್ತವಾಗಿದೆ. ಕವನಗಳಿಗೆ ಸಮಾಜವನ್ನು ಬಲವರ್ಧನೆ ಮಾಡುವ ಶಕ್ತಿಯಿದೆ ಎಂದು ಹೇಳಿದರು.
ಸಾಧಕರಿಗೆ ಸನ್ಮಾನ : ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪದ್ಮಶ್ರೀ ಪುಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ನಿರ್ಮಾಪಕಿ, ನಿರ್ದೇಶಕಿ ಕೊಟ್ಟುಕತ್ತಿರ ಯಶೋದಾ ಪ್ರಕಾಶ್, ಸಾಹಿತಿ, ಪ್ರತಮ ದರ್ಜೆ ಮಹಿಳಾ ಕಾಲೇಜು ಸಹಪ್ರಾಧ್ಯಾಪಕಿ ಡಾ.ಕೋರನ ಸರಸ್ವತಿ ಪ್ರಕಾಶ್ ಅವರುಗಳನ್ನು ಸನ್ಮಾನಿಸಲಾಯಿತು. ಕವನ ಸ್ಪಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಪ್ರಾರ್ಥಿಸಿದರೆ, ಚೆಟ್ಟೋಳಿರ ಶರತ್ ಸೋಮಣ್ಣ ಕಾರ್ಯಕ್ರಮ ನಿರೂಪಿಸಿದರು. ಮಹೇಂದ್ರ ಸ್ವಾಗತಿಸಿ, ಟಿ.ಎನ್. ವಿನೋದ್ ವಂದಿಸಿದರು.










