ಮಡಿಕೇರಿ ಏ.15 : ನಗರದ ಸಂಪಿಗೆಕಟ್ಟೆಯ ನಿವಾಸಿ, ಸಮಾಜ ಸೇವಕ ಎಂ.ಖಲೀಲ್ ಅವರು ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಏ.18 ರಂದು ಮಡಿಕೇರಿಯಲ್ಲಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿರುವ ಅವರು, ತಾನು ನಿರಂತರವಾಗಿ ಸಮಾನ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಜನರದ ನೋವಿಗೆ ಸ್ಪಂದಿಸುತ್ತಿದ್ದೇನೆ. ಈ ಹಿಂದೆಯೂ ಹಲವು ಚುನಾವಣೆಗಳಲ್ಲಿ ಸ್ಪರ್ಧಿಸಿದ್ದೇನೆ. ರಾಜಕೀಯ ಪಕ್ಷಗಳಿಂದ ಬೇಸತ್ತಿರುವ ಮಡಿಕೇರಿ ಕ್ಷೇತ್ರದ ಜನ ಈ ಬಾರಿ ಬದಲಾವಣೆಯನ್ನು ಬಯಸುತ್ತಿದ್ದು, ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಭ್ರಷ್ಟಾಚಾರ ಮುಕ್ತ ಆಡಳಿತ, ಸರ್ವಋತು ರಸ್ತೆ ನಿರ್ಮಾಣ, ರೈತಾಪಿ ವರ್ಗದ ಸಮಸ್ಯೆಗಳಿಗೆ ಸ್ಪಂದನೆ, ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿ, ಉನ್ನತ ಶಿಕ್ಷಣಕ್ಕೆ ಆದ್ಯತೆ, ಕ್ರೀಡಾಂಗಣಗಳ ಅಭಿವೃದ್ಧಿಗೆ ಕ್ರಮ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ, ಪ್ರವಾಸಿತಾಣಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಹೈಟೆಕ್ ಗೊಳಿಸುವುದು, ನಿವೇಶನ ರಹಿತ ಬಡವರು ಹಾಗೂ ಕಾರ್ಮಿಕರಿಗೆ ವಸತಿ ಯೋಜನೆಯಡಿ ಸೂರು ಕಲ್ಪಿಸುವುದು, ಸರ್ಕಾರದ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವುದು ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಗೆದ್ದು ಬಂದರೆ ಮಾಡುವುದಾಗಿ ಖಲೀಲ್ ಭರವಸೆ ನೀಡಿದ್ದಾರೆ.











