ಮಡಿಕೇರಿ ಏ.15 : ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಚಿತ್ರಸಂತೆಯಂಥ ಕಲಾಪ್ರಕಾರ ಆಯೋಜಿಸಲು ಸೂಕ್ತ ತಾಣವಾಗಿದ್ದು, ಮುಂದಿನ ದಿನಗಳಲ್ಲಿ ವಿನೂತನವಾದ ಚಿತ್ರಸಂತೆಯನ್ನು ಆಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ತಿಳಿಸಿದ್ದಾರೆ.
ನಗರದ ರಾಜಾಸೀಟು ಉದ್ಯಾನವನದಲ್ಲಿ ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಮಡಿಕೇರಿ ತಾಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ಶನಿವಾರ ಆಯೋಜಿತವಾಗಿದ್ದ ‘ಕೊಡಗು ಮತ್ತು ಮತದಾನ’ ಚಿತ್ರಕಲಾ ಸ್ಪರ್ಧೆ ಮತ್ತು ನಾನು ಮತ ಹಾಕುವೆ ಎಂಬ ಬೃಹತ್ ಕ್ಯಾನ್ವಸ್ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ವೀಪ್ ಸಮಿತಿ ವತಿಯಿಂದ ನಾನಾ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ಮತದಾನದ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಮಾಡುವ ಹೊಣೆಗಾರಿಕೆ ಸಮಿತಿ ಮೇಲಿದೆ. ಈ ನಿಟ್ಟಿನಲ್ಲಿ ಮತದಾನದ ಮಹತ್ವ ಸಾರುವ ಚಿತ್ರಕಲಾ ಸ್ಪರ್ಧೆಯನ್ನೂ ಮಡಿಕೇರಿ ತಾಲೂಕು ಜಾನಪದ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರಕಿರುವುದು ಹರ್ಷ ತಂದಿದೆ ಎಂದರು.
ಭಾನುವಾರ ಮಡಿಕೇರಿಯಲ್ಲಿ ಮತದಾನ ಮಹತ್ವ ಸಾರುವ ಬೈಕ್ ಜಾಥಾ, ಏಪ್ರಿಲ್, 30 ರಂದು ರಂಗೋಲಿ ಸ್ಪರ್ಧೆ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಅವರು ಮಾತನಾಡಿ, ಚಿತ್ರಕಲಾ ಸ್ಪರ್ಧೆಯಲ್ಲಿ 132 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. 14 ವರ್ಷದೊಳಗಿನ ಮಕ್ಕಳು ಕೂಡ ಮತದಾನದ ಮಹತ್ವ ಅರಿಯಲು ಚಿತ್ರಕಲಾ ಕಾರ್ಯಕ್ರಮ ಉಪಯುಕ್ತವಾಗಿದೆ. ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ಕೋವಿಡ್‍ಗಿಂತ ಮುಂಚಿನ ವರ್ಷಗಳಲ್ಲಿ 5 ಸಲ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಶ್ವಚಿತ್ರಕಲಾ ದಿನಾಚರಣೆಯನ್ನು ಈ ಬಾರಿ ಜಿಲ್ಲಾಡಳಿತ, ಕೊಡಗು ಜಿಲ್ಲಾ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿಯ ಸಹಯೋಗದೊಂದಿಗೆ ತಾಲೂಕು ಜಾನಪದ ಪರಿಷತ್ ಆಯೋಜಿಸಿದೆ ಎಂದರು.
ಮತದಾನದ ಮಹತ್ವ ಸಾರುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತದ ರಾಯಭಾರಿಗಳಾದ ಬಸವರಾಜ ಬಡಿಗೇರ್ ಮತದಾನದ ಮಹತ್ವ ಸಾರುವ ಹಾಡಿನ ಸಾಲುಗಳ ಮೂಲಕ ಗಮನ ಸೆಳೆದರು. ರಾಯಭಾರಿ ವಿಶೇಷ ಚೇತನರಾದ ಎಸ್.ಕೆ. ಈಶ್ವರಿ ಮಾತನಾಡಿ, ಹಿರಿಯ ನಾಗರಿಕರು, ವಿಶೇಷ ಚೇತನರು ಕೂಡ ಈ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಕೋರಿದರು.
ಮುಳುಗು ತಜ್ಞ ಮತ್ತು ಚುನಾವಣಾ ರಾಯಭಾರಿ ಕೆ.ರವಿಮುತ್ತಪ್ಪ ಮಾತನಾಡಿ ನಿರ್ಭೀತಿಯಿಂದ ಎಲ್ಲರೂ ಮತದಾನ ಮಾಡಬೇಕೆಂದು ಕರೆ ನೀಡಿದರು.
ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ ಅರ್ಹರು ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸಬೇಕು ಎಂದರು.
ಮತದಾನದ ಮಹತ್ವ ಕುರಿತು ತಮ್ಮ ಊರುಗಳಲ್ಲಿಯೂ ಜಾಗೃತಿ ಮೂಡಿಸಬೇಕು. ಯಾರೂ ಸಹ ಮತದಾನದಿಂದ ದೂರ ಉಳಿಯಬಾರದು ಎಂದು ಅನಂತಶಯನ ಅವರು ಹೇಳಿದರು.
ಜಿ.ಪಂ.ಮುಖ್ಯ ಯೋಜನಾಧಿಕಾರಿ ರಾಜ್‍ಗೋಪಾಲ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ನಾಯಕ್, ಹಿರಿಯ ಸಹಾಯಕ ನಿರ್ದೇಶಕರಾದ ಪ್ರಮೋದ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಸಿ.ರಂಗಧಾಮಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪುಟ್ಟರಾಜು, ಮೂರ್ನಾಡು ಜಾನಪದ ಪರಿಷತ್ ನಿರ್ದೇಶಕರಾದ ಕಿಗ್ಗಾಲು ಹರೀಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವ ಪಲ್ಲೇದ್, ಕುಶಾಲನಗರ ಜಾನಪದ ಪರಿಷತ್ ಅಧ್ಯಕ್ಷರಾದ ಚಂದ್ರಮೋಹನ್, ಮಡಿಕೇರಿ ತಾಲೂಕು ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸ್ವೀಪ್ ಸಮಿತಿಯ ಅಧಿಕಾರಿ ನವೀನ್, ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಸಂಪತ್ ಕುಮಾರ್, ರೋಟರಿ ಪ್ರಮುಖರಾದ ರತನ್ ತಮ್ಮಯ್ಯ, ಪ್ರಮೋದ್ ಕುಮಾರ್ ರೈ, ವಿನೋದ್ ಎ.ಕೆ., ಜಿ.ಆರ್. ರವಿಶಂಕರ್, ರೆಡ್‍ಕ್ರಾಸ್ ಸಭಾಧ್ಯಕ್ಷ ಬಿ.ಕೆ.ರವೀಂದ್ರ ರೈ, ಆರೋಹಣ ತಂಡದ ಕೆ.ಮಹೇಶ್ ಕುಮಾರ್, ಸ್ಕೌಟ್ ಅಂಡ್ ಗೈಡ್ಸ್‍ನ ಕೆ.ಟಿ.ಬೇಬಿ ಮ್ಯಾಥ್ಯು, ಕೊಡವ ಮಕ್ಕಡ ಕೂಟದ ಬೊಳ್ಳಜೀರ ಅಯ್ಯಪ್ಪ, ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಡಾ.ರೇಣುಕಾ ಸುಧಾಕರ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಇದೇ ಸಂದರ್ಭ ಜಿಲ್ಲೆಯ ಕಲಾವಿದರಾದ ಬಿ.ಆರ್.ಸತೀಶ್ ರಚಿಸಿದ ನಾನು ಮತ ಹಾಕುವೆ… ಮತದಾನ ನನ್ನ ಹಕ್ಕು ಎಂಬ ಬೃಹತ್ ಕ್ಯಾನ್ವಸ್ ನಲ್ಲಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಸಹಿ ಹಾಕುವ ಮೂಲಕ ಮತದಾನದ ಅಭಿಯಾನಕ್ಕೆ ಚಾಲನೆ ನೀಡಿದರು.
ಜಿಲ್ಲೆಯ ವಿವಿಧೆಡೆಗಳ ಕಲಾವಿದರಾದ ಉ.ರಾ.ನಾಗೇಶ್, ಬಸವರಾಜ ಬಡಿಗೇರ್, ಸದಾನಂದ ಪುರೋಹಿತ್, ಸಾಧಿಕ್, ಸಂದೀಪ್, ಬಾವಾ ಮಾಲ್ದಾರೆ. ಮಂಜುನಾಥ್, ಮೃಣಾಲಿನಿ ಚಿಣ್ಣಪ್ಪ. ಪಯಸ್ವಿನಿ ಸತೀಶ್, ಸೂರತ್ ಪ್ರಸಾದ್ ಸೇರಿದಂತೆ ಅನೇಕ ಕಲಾವಿದರು ಮತದಾನದ ಮಹತ್ವ ಸಾರುವ ವರ್ಣಮಯ ಚಿತ್ರರಚಿಸಿ ಗಮನ ಸೆಳೆದರು. ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಕಾರ್ಯಕ್ರಮ ನಿರೂಪಿಸಿದರು.