ಮಡಿಕೇರಿ ಏ.15 : ಕೊಡವ ಹೊಸ ವರ್ಷಾಚರಣೆ ಎಡ್ಮ್ಯಾರ್ ಒಂದ್ ರ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಬೆಟ್ಟತ್ತೂರು ಗ್ರಾಮದ ಕೂಪದಿರ ಮೋಹನ್ ಅವರ ಗದ್ದೆಯಲ್ಲಿ ಉಳುಮೆ ಕಾರ್ಯ ಮಾಡಿ ಭೂದೇವಿಗೆ ನಮಿಸಿತು.
ದೇವಟ್ ಪರಂಬುವಿನ ಕೊಡವ ನರಮೇಧದ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಸಿ ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆ ಆವರಣದಲ್ಲಿ ಹತ್ಯೆಗೀಡಾದ ಕೊಡವರ ಪರವಾಗಿ ಪ್ರಾರ್ಥಿಸಿತು.
ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಎತ್ತುಗಳ ಸಹಾಯದಿಂದ ಗದ್ದೆಯನ್ನು ಸಾಂಪ್ರದಾಯಿಕವಾಗಿ ಉಳುಮೆ ಮಾಡಿದರು. ಕೊಡವ ಸಾಂಪ್ರದಾಯಿಕ ಆಚರಣೆಗಳು ಭೂತಾಯಿಯ ಮಣ್ಣಿನೊಂದಿಗೆ ಕೊಡವ ಬುಡಕಟ್ಟಿನ ಅವಿನಾಭಾವ ಬಂಧವನ್ನು ಪ್ರದರ್ಶಿಸುತ್ತದೆ ಎಂದು ಅವರು ಇದೇ ಸಂದರ್ಭ ಅಭಿಪ್ರಾಯಪಟ್ಟರು.
ಬುಡಕಟ್ಟು ಜನಾಂಗವಾಗಿರುವ ಕೊಡವರ ಮೂಲ ಸಂಸ್ಕೃತಿಯನ್ನು ಸಂರಕ್ಷಿಸಲು ಈ ರೀತಿಯ ಆಚರಣೆಗಳು ಸಾರ್ವಜನಿಕವಾಗಿ ನಡೆಯಬೇಕು. ಕೊಡವ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಸಿಎನ್ಸಿ ಮಾಡುತ್ತಿದೆ ಎಂದರು.
ಕೂಪದಿರ ಮೋಹನ್, ಕೂಪದಿರ ಗಂಗಮ್ಮ, ಕೂಪದಿರ ತಂಗಮ್ಮ, ಕೂಪದಿರ ಕಾವೇರಮ್ಮ, ಕೂಪದಿರ ರೋಶನ್, ಕೂಪದಿರ ಎನ್.ದಿಲೀಪ್, ಕೂಪದಿರ ಮನು ದೇವಯ್ಯ, ಕೂಪದಿರ ಸಾಬು ತಿಮ್ಮಯ್ಯ, ಕೂಪದಿರ ಪ್ರಣಾಮ್, ಕಲಿಯಂಡ ಪ್ರಕಾಶ್, ಅರೆಯಡ ಗಿರೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.











