ಚೆಟ್ಟಳ್ಳಿ ಏ.15 : ಚೆಟ್ಟಳ್ಳಿಯ ಶ್ರೀಮಂಗಲ (ಪೊವ್ವೊದಿ ) ಭಗವತಿ ಉತ್ಸವವು ಎರಡು ದಿನಗಳ ಕಾಲ ಶ್ರದ್ದಾಭಕ್ತಿಯಿಂದ ನೆರವೇರಿತು.
ಶುಕ್ರವಾರದಂದು ನಡೆದ ಪಟ್ಟಣಿ ಹಬ್ಬದಂದು ಊರಿನವರ ಸಮ್ಮುಖದಲ್ಲಿ ದುಡಿಕೊಟ್ಟು ಹಾಡಿನೊಂದಿಗೆ ದೇವಾಲಯ ತಕ್ಕರಾದ ಮುಳ್ಳಂಡ ಐನ್ ಮನೆಯಿಂದ ಎತ್ತುಪೋರಾಟದೊಂದಿಗೆ ದೇವರ ಭಂಡಾರವನ್ನು ತರಲಾಯಿತು. ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಶನಿವಾರ ದೊಡ್ದಹಬ್ಬವಾಗಿದ್ದು ದೇವರ ಭಂಡಾರವನ್ನು ದೇವಾಲಯಕ್ಕೆ ತರುವುದು ವಿಶೇಷ ಪೂಜೆ, ತೆಂಗಿಕಾಯಿ ಎಳೆಯುವುದು, ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಿತು. ಬೊಳಕ್ ಮರವನ್ನು ತೆಗೆದು ದೇವಾಲಯದ ಗರ್ಭಗುಡಿಯೊಳಗೆ ಇಡಲಾಯಿತು. ನಂತರ ದೇವರ ನೆಲೆಯಲ್ಲಿ ಭಕ್ತಾದಿಗಳು ಹರಕೆ ಕಾಣಿಕೆ ಒಪ್ಪಸಿದರು. ಪ್ರಸಾದ ವಿತರಣೆ ನಡೆಯಿತು.
ಏ.16 ರ ಭಾನುವಾರ ಪೂರ್ವಾಹ್ನ 7 ಗಂಟೆಗೆ ದೇವಾಲಯದಲ್ಲಿ ಶುದ್ಧ ಕಳಸ ಪೂಜೆ ನೆವೇರಿಸಿ ದೇವರ ಭಂಡಾರವನ್ನು ತಕ್ಕರಾದ ಮುಳ್ಳಂಡ ಐನ್ ಮನೆಯಲ್ಲಿ ಒಪ್ಪಿಸಲಾಗುವುದು ಎಂದು ದೇವಾಲಯದ ಪ್ರಮುಖರು ತಿಳಿಸಿದ್ದಾರೆ.