ಮಡಿಕೇರಿ ಏ.18 : ಹೌದು ಭಾಷಣಗಳು ವಿಚಾರವಾದದಿಂದ ಕೂಡಿರಬೇಕೆ ಹೊರತು ಪ್ರಚೋದನಕಾರಿಯಾಗಿರಬಾರದು. ಭಾಷಣಗಳು ಸಮಾಜದ ಮೇಲೆ ಒಂದು ಅದ್ಬುತ ಪರಿಣಾಮ ಬೀರುವ ಒಂದು ಮಾರ್ಗ. ಭಾಷಣದಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ. ಅದೇ ರೀತಿ ಕೆಲವು ಭಾಷಣಗಳು ನಾಶಕ್ಕೂ ಕಾರಣವಾಗುತ್ತದೆ. ಇಂತಹ ಅನೇಕ ನಿದರ್ಶನಗಳು ನಡೆದಿದೆ.
ಭಾಷಣಗಳನ್ನು ಮಾಡುವುದು ಒಂದು ಕಲೆ. ಇದು ಕೆಲವರಿಗೆ ರಕ್ತಗತವಾಗಿರುತ್ತದೆ. ಇನ್ನೂ ಕೆಲವರು ಪರಿಶ್ರಮದಿಂದ ಕರಗತ ಮಾಡಿಕೊಂಡಿರುತ್ತಾರೆ. ಕೆಲವು ನಮ್ಮ ರಾಜಕಾರಣಿಗಳು ಮಾತ್ರ ಒಂದಷ್ಟೂ ಒದರುವುದೇ ಭಾಷಣ ಎಂದು ಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಮಗೆ ಸಮಾಜದಲ್ಲಿ ಕಂಡು ಬರುತ್ತಿರುವುದೇನೆಂದರೆ ನಾಲಗೆಯ ಮೇಲೆ ಹಿಡಿತವಿಲ್ಲದ ಭಾಷಣಗಳು. ಯಾರು, ಯಾರ ಮೇಲೆ, ಯಾವ ವಿಷಯದ ಮೇಲೆ ತಾವು ಭಾಷಣ ಮಾಡುತ್ತಿದ್ದೇವೆ ಎಂದು ಅವರಿಗೆ ಅರಿವು ಇರುವುದಿಲ್ಲ. ಅಬ್ಬರಿಸುವುದೇ ಭಾಷಣವಾಗಿದೆ. ಹಿರಿಯರು, ಕಿರಿಯರು, ಪದವಿಗಳಿಗೆ ಮೌಲ್ಯಗಳಿಗೆ ಬೆಲೆ ನೀಡದೆ ಏಕವಚನದಲ್ಲಿ ಸಂಭೋದಿಸುವುದು ಕೇಳುಗರಿಗೆ ಮುಜುಗರ ಉಂಟು ಮಾಡುತ್ತದೆ.
ಈ ಬರವಣಿಗೆ ಬರೆಯಲು ಕಾರಣವೇನೆಂದರೆ ಇತ್ತೀಚಿನ ದಿನಪತ್ರಿಕೆಯೊಂದರಲ್ಲಿ ಭಾರತದ ಉಚ್ಚ ನ್ಯಾಯಾಲಯವು ಕಕ್ಷಿದಾರೊಬ್ಬರಿಗೆ ಸೂಚನೆ ಒಂದನ್ನು ನೀಡಿ ಲಂಗು¯ಗಾಮಿಲ್ಲದ ಭಾಷಣದ ಮೇಲೆ ಹಿಡಿತವಿರಲಿ. ಭಾಷಣವನ್ನು ಮಾಡುವುದನ್ನು ಜವಹರಲಾಲ್ ನೆಹರು, ಅಟಲ್ ಬಿಹಾರಿ ವಾಜಪೇಯಿ ಅಂತವರ ಭಾಷಣವನ್ನು ಕೇಳಿ ಕಲಿಯಿರಿ ಎಂದು ಉದಾಹರಣೆ ಸಹಿತ ಎಚ್ಚರಿಕೆ ನೀಡಿತು. ಭಾಷಣಗಳು ಸಮಾಜದ ಬದಲಾವಣೆಗೆ ಮುನ್ನುಡಿಯಾಗಿರಬೇಕೆ ಹೊರತು ಸಮಾಜಕ್ಕೆ ಕಗ್ಗತ್ತಲಾಗಬಾರದು. ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕೆಂಬ ಸೂಚನೆಯನ್ನು ನೀಡಿತು.
ಕೆಲವರಿಗೆ ಭಾಷಣಗಳು ಬದುಕಿನ ಬಂಡವಾಳ. ಅವರಿಗೆ ಮಾಡಲು ಬೇರೆ ಉದ್ಯೋಗವಿರುವುದಿಲ್ಲ. ಸಮಾಜದಲ್ಲಿ ಸ್ಥಾನಮಾನ ಪಡೆಯಲು ಅದನ್ನು ಉಳಿಸಿಕೊಳ್ಳಲು ನಮ್ಮ ಹೊಟ್ಟೆಹೊರೆದುಕೊಳ್ಳಲು ತಮ್ಮ ಕಂಠವನ್ನು ನಾಲಿಗೆಯನ್ನು ಬಂಡವಾಳ ಮಾಡಿಕೊಂಡಿರುತ್ತಾರೆ. ಇಂತವರಿಗೆ ಎಲ್ಲಿ ಹೇಗೆ ಮಾತನಾಡಬೇಕು ಜನರನ್ನು ಹೇಗೆ ಉದ್ರೇಕಿಸಬೇಕು ಹಾಗೆ ಮುಟ್ಟಾಳರನ್ನಾಗಿ ಮಾಡುವ ಕಲೆಯು ಇವರಿಗೆ ಕರಗತ. ಇಂತವರು ಹೆಚ್ಚಾಗಿ ಪ್ರಚೋದನಕಾರಿ ಭಾಷಣವನ್ನು ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇನ್ನೂ ಧಾರ್ಮಿಕ ಸಮಾರಂಭಗಳು, ಧಾರ್ಮಿಕ ಸಮ್ಮೇಳನಗಳು, ಸಮಾಜೋತ್ಸವ, ಧಾರ್ಮಿಕ ಪ್ರವಚನ ಬಿಟ್ಟು ಧರ್ಮ ಪ್ರಚೋದನೆ ಭಾಷಣವನ್ನು ಮಾಡಿ ಯುವ ಜನರ ಮನಸನ್ನು ಚಂಚಲಗೊಳಿಸುತ್ತಾರೆ. ಇದರಿಂದ ಇವರುಗಳು ಹೀರೋಗಳಾಗುತ್ತಾರೆ. ಭಾಷಣ ಕೇಳಿದ ಯುವ ಜನತೆಯು ದಾರಿ ತಪ್ಪಿ ಸಮಾಜದಲ್ಲಿ ಕೋಮು ಗಲಭೆಗಳಿಗೆ ದಾರಿ ಉಂಟು ಮಾಡುತ್ತಾರೆ. ಇವರುಗಳು ಒಂದಷ್ಟೂ ಕೇಸುಗಳನ್ನು ಹಾಕಿಸಿಕೊಂಡು ಪೋಲಿಸ್ ಕೋರ್ಟ್ ಎಂದು ಅಲೆದಾಡಿ ನಮ್ಮ ಜೀವನವನ್ನು ನಷ್ಟಪಡಿಸಿಕೊಳ್ಳುತ್ತಾರೆ.
ಭಾಷಣ ಮಾಡಿದವನು ಎ.ಸಿ.ಕೊಠಡಿ ಮತ್ತು ಗಾಡಿಗಳಲ್ಲಿ ಸಂಚರಿಸುತ್ತಾ ಸಮಾಜದ ಎಲ್ಲಾ ಲಾಭವನ್ನು ಪಡೆದುಕೊಂಡು ನಾಯಕನಾಗಿರುತ್ತಾನೆ. ವಿಪರ್ಯಾಸವೆಂದರೆ ಇಂತವರ ಮಕ್ಕಳು ಕೇಸು ಜಡಿಸಿರುವುದಿಲ್ಲ. ಜೈಲು ಊಟ ತಿನ್ನುವುದಿಲ್ಲ. ಇದೆಲ್ಲ ಪಾಪದ ಶ್ರೀಸಾಮಾನ್ಯರಿಗೆ.
ಇನ್ನೂ ರಾಜಕಾರಣಿಗಳಿಗೆ ಇತ್ತೀಚಿನ ದಿನಗಳಲ್ಲಿ ಲಂಗುಲಗಾಮು ಇರುವುದಿಲ್ಲ. ಚುನಾವಣಾ ವರ್ಷವಂತು ಅವರ ಭಾಷಣವನ್ನು ಕೇಳಲು ಅಸಹ್ಯ ಹುಟ್ಟಿಸುತ್ತದೆ. ನಮ್ಮನ್ನಾಳಿವವರು ನಮಗೆ ಆದರ್ಶವಾಗಿರಬೇಕು. ಅವರ ಭಾಷೆ ಅವರ ಯೋಗ್ಯತೆಯನ್ನು ತೋರಿಸುತ್ತದೆ. ಹಿರಿಯರು ಕಿರಿಯರು ಸ್ಥಾನಮಾನದ ಬೆಲೆ ಅರಿಯದೆ ಹೇಗೆ ಮಾತನಾಡಬೇಕೆಂಬುದನ್ನು ಅರಿಯದೆ ಮಾತನಾಡುವವರ ಶೈಲಿ ಅದಕ್ಕೆ ಸರಿಯಾದ ಅವರ ಹಾವಭಾವಗಳು ತೀರ ದುರಾದೃಷ್ಟಕರ. ಇತ್ತೀಚಿನ ದಿನಗಳಲ್ಲಿ ದೇಶದ ಪ್ರದಾನಮಂತ್ರಿ ಮತ್ತು ಇತರ ಉನ್ನತ ಸ್ಥಾನಗಳಲ್ಲಿರುವವರ ಕುರಿತು ಬಳಸುವ ಭಾಷೆಗಳು ಅದು ಒಬ್ಬ ಒಂದು ರಾಜ್ಯದ ಸಾಮಾನ್ಯ ಶಾಸಕ ಅಥವಾ ಪಕ್ಷವೊಂದರ ಮುಖಂಡರುಗಳು ಮಾತನಾಡುವ ಶೈಲಿ ನಿಜಕ್ಕೂ ದುರಾದ್ರಷ್ಟಕರ. ಪ್ರತಿಯೊಂದು ಸ್ಥಾನಮಾನಕ್ಕೂ ಬೆಲೆ ಇದೆ. ನಾವು ಬೆಲೆ ಕೊಡುವುದು ಸ್ಥಾನಮಾನಕ್ಕೆ ಹೊರತು ವ್ಯಕ್ತಿಗಲ್ಲ.
ಧರ್ಮದ ಬಗ್ಗೆ ಭಾಷಣ ಮಾಡುವವರು ಇನ್ನೊಂದು ವರ್ಗ. ಇಲ್ಲಿ ತಮ್ಮ ಧರ್ಮವೇ ಶ್ರೇಷ್ಠವೆಂದು ಪ್ರತಿಪಾದಿಸಿ ಪರಿಸ್ಥಿತಿಯ ಲಾಭವನ್ನು ಪಡೆಯುತ್ತಾರೆ. ಧರ್ಮ ವಿಚಾರವಾಗಿ ಮಾತನಾಡುವಾಗ ಧರ್ಮದ ಸಾರಾಂಶ, ಧರ್ಮದ ತಿರುಳುಗಳನ್ನು ಅದರ ಆಚರಣೆ ಧರ್ಮದ ಮಹತ್ವ ಸಾಗಬೇಕು. ಆದರೆ ಇಂದು ಸ್ವಹಿತಕ್ಕಾಗಿ ಮತಬ್ಯಾಂಕ್ ನಿರ್ಮಾಣಕ್ಕಾಗಿ ತಾವು ದೊಡ್ಡ ನಾಯಕರುಗಳಾಗಲು ಭಾಷಣಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಂಡು ಇನ್ನೊಂದು ಧರ್ಮವನ್ನು ಹಳಿಯುತ್ತಾ ತಮ್ಮ ಧರ್ಮವೇ ಶ್ರೇಷ್ಠವೆಂದು ಸಾರುವ ಭರದಲ್ಲಿ ಸಮಾಜದಲ್ಲಿ ಮನುಕುಲದಲ್ಲಿ ಜನಾಂಗಗಳ ನಡುವೆ ದೊಡ್ಡ ಕಂದಕವೇ ನಿರ್ಮಾಣವಾಗಿದೆ. ಇವರುಗಳು ಪರಿಸ್ಥಿತಿಯ ಲಾಭ ಪಡೆದು ಸಮಾಜದಲ್ಲಿ ನಾಯಕರಾಗುತ್ತಾರೆ. ಸಾಮಾನ್ಯ ಜನರು ಇದರಿಂದ ಕಷ್ಟಗೀಡುತ್ತಾರೆ. ಇನ್ನೊಂದು ವಿಪರ್ಯಾಸವೆಂದರೆ ಸ್ವಾಮೀಜಿಗಳು ರಾಜಕಾರಣಿಗಳಂತೆ ಭಾಷಣ ಮಾಡುವರು. ಯಾರು ಸಮಾಜದಲ್ಲಿ ಸಾಮಾಜಿಕ ನ್ಯಾಯ ಒದಗಿಸಬೇಕಿತ್ತೋ ಅಂತವರು ಅವರ ಜಾತಿಗೆ ಸೀಮಿತವಾಗಿ ಭಾಷಣ ಮಾಡುವುದು ಸಮಾಜದಲ್ಲಿ ದೊಡ್ಡ ವಿಪರ್ಯಾಸ.
ಇಂದು ನಮ್ಮನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳ ಸದನಗಳು ಕುಲಗೆಟ್ಟು ಹೋಗಿದೆ. ಅಲ್ಲಿ ನಡೆಯುವ ಚರ್ಚೆಗಳಲ್ಲಿ ಬಳಸುವ ಪದಗಳು ಅವರ ವರ್ತನೆಗಳು ಇಡೀ ಶಾಸಕಾಂಗಕ್ಕೆ ಕಳಂಕ. ಹಿಂದೆ ಸದನಗಳಲ್ಲಿ ಕೆಲವು ನಾಯಕರು ಮಾತನಾಡಲು ನಿಂತರೆ ಅವರ ಭಾಷಣಕ್ಕೆ ಬೆಲೆ ನೀಡಿ ನಿಶ್ಯಬ್ಧದಿಂದ ಈ ಸದನವು ಗೌರವ ಸೂಚಿಸುತ್ತಿತ್ತು. ಅಂತಹ ಧೀಮಂತ ಸಂಸದೀಯ ಪಟುಗಳನ್ನು ಹೊಂದಿದ್ದ ನಮ್ಮ ನಾಡು ಇಂದು ರಾಜಕೀಯದ ವ್ಯಾಪಾರಿಕರಣದಿಂದ ವಂಶಪಾರಂಪರಿಕ ರಾಜಕಾರಣಗಳಿಂದ ಯೋಗ್ಯತೆಯಿಲ್ಲದವರೆಲ್ಲಾ ನಮ್ಮ ಜನಪ್ರತಿನಿಧಿಗಳಾಗಿದ್ದಾರೆ. ಇಂತವರಿಂದ ಉತ್ತಮ ಶಾಸಕಾಂಗವನ್ನು ಹೇಗೆ ನಿರೀಕ್ಷಿಸಬಹುದು.
ಇನ್ನೂ ಕೆಲವರಿಗೆ ಇತಿಹಾಸವನ್ನು ಬಗೆದು ಮಜ ನೋಡುವುದೇ ಒಂದು ಹವ್ಯಾಸವಾಗಿರುತ್ತದೆ. ಇತಿಹಾಸವನ್ನು ಬಗೆದು ಪ್ರಸ್ತುತ ಸಮಾಜದಲ್ಲಿ ಅದನ್ನು ಉಲ್ಲೇಖಿಸಿ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವುದು ಎಷ್ಟು ಸಮಂಜಸ. ಇವರುಗಳು ಸಮಾಜದಲ್ಲಿ ದೊಡ್ಡ ಹೀರೋಗಳು. ಕೆಲವರಂತೂ ಅವರಿಗೆ ಆ ಘಟನೆಯಿಂದ ತೊಂದರೆಯಾಗಿದೆ ಎಂಬಂತೆ ಚಿತ್ರಿಸುತ್ತಾರೆ. ಇತಿಹಾಸವನ್ನು ಕೆದಕಿ ಪ್ರಸ್ತುತ ರಾಜಕೀಯ ಲಾಭ ಪಡೆಯುವುದು ಎಷ್ಟು ಸಮಂಜಸ. ಇತಿಹಾಸದಿಂದ ನಾವು ಕಲಿಯಬೇಕಿದೆ. ಅದು ಕೆಟ್ಟದೇ ಇರಲಿ, ಒಳ್ಳೆಯದೇ ಇರಲಿ.
ಹಿಂದೆ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ತಮ್ಮ ಪಕ್ಷದ ಸಿದ್ದಾಂತದ ಬಗ್ಗೆ ಆಡಳಿತ ಪಕ್ಷದವರು ಸರಕಾರದ ಸಾಧನೆಯ ಆದಾರದಡಿಯಲ್ಲಿ ಭಾಷಣ ಮಾಡಿ ಮತ ಯಾಚಿಸುತ್ತಿದ್ದಾರೆ. ವಿರೋಧ ಪಕ್ಷದವರು ಆಡಳಿತ ಪಕ್ಷದ ನ್ಯೂನತೆಯನ್ನು ಎತ್ತಿ ಹಿಡಿದು ಅವುಗಳನ್ನು ದಾಖಲೆ ಸಹಿತ ಜನರ ಮುಂದಿಟ್ಟು ಭಾಷಣ ಮಾಡುತ್ತಿದ್ದರು. ಆದರೆ ಇಂದು ಪರಿಸ್ಥಿತಿ ವಿಬಿನ್ನವಾಗಿದೆ. ಚುನಾವಣೆಗೆ ವರ್ಷಗಳು ಇರುವಾಗಲೆ ಸಮಾವೇಶಗಳು ಯಾತ್ರೆಗಳು ಜನೋತ್ಸವಗಳು ಹೀಗೆ ಜನರ ಹಣವನ್ನು ಪೋಲು ಮಾಡಿಕೊಂಡು ನಡೆಸುವ ಸಮಾರಂಭಗಳಿಗೆ ಮಾಡುವ ಭಾಷಣಗಳು ವೈಯಕ್ತಿಕ ದೂಷಣೆ ಆಧಾರವಾಗಿರುತ್ತದೆ. ಕೆಲವೆಡೆ ಖಾಲಿ ಕುರ್ಚಿಗಳು ಭಾಷಣ ಮಾಡುವ ಪರಿಸ್ಥಿತಿ ಬಂದರೂ ಅವರು ಮಾತನಾಡುವುದು ನಿಲ್ಲಿಸುವುದಿಲ್ಲ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಕೆಲ ವ್ಯಕ್ತಿಗಳು ಇತಿಹಾಸದ ಬಗ್ಗೆ ಹಾಗೂ ಇತಿಹಾಸದ ಘಟನೆಗ:ಳ ಬಗ್ಗೆ ಇತಿಹಾಸದಲ್ಲಿ ಲೀನವಾದ ವ್ಯಕತಿಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ವೈಭವೀಕರಿಸಿ ಹರಿಬಿಡುವುದು ಒಂದು ಅಂಟುರೋಗವಾಗಿದೆ. ಕೆಲವರಂತು ತಾವೇ ಸ್ವತಃ ಆ ಸಮಸ್ಯೆಯನ್ನು ನೋಡಿದವರಾಗೆ ಅಥವಾ ತಾವೇ ಅನುಭವಿಸಿದಂತೆ ಅದನ್ನು ಹೇಳುವ ಪರಿ ನಿಜಕ್ಕೂ ದುರದೃಷ್ಟಕರ. ಇಂತಹ ದ್ವನಿಮುದ್ರಿಕೆಗಳು ಏಕ್ಷಿಯವಾಗಿರುತ್ತದೆ. ಇವುಗಳು ಸಮಾಜಕ್ಕೆ ಹಾನಿಕರ. ಯಾರೇ ಆಗಲಿ ಇತಿಹಾಸವನ್ನು ಕೊರೆಯುವುದರಿಂದ ಸಮಾಜದ ನವ ನಿರ್ಮಾಣ ಸಾಧ್ಯವಿಲ್ಲ. ಇತಿಹಾಸದಿಂದ ಆದ ಹಾನಿಯ ಬಗ್ಗೆ ವಿಶ್ಲೇಷಣೆ ಬೇಕು. ಅದನ್ನು ಪ್ರಸ್ತುತ ಸಮಾಜಕ್ಕೆ ಹೋಲಿಸುವುದು ತಪ್ಪು. ಇಲ್ಲಿ ಅನುಭವಿಸಿದವನು ತಪ್ಪು ಮಾಡಿದವನು ಇಬ್ಬರು ಇಲ್ಲ ಎಂಬುದನ್ನು ಅರಿಯಬೇಕು.
“ಒಬ್ಬ ಸಾಮಾನ್ಯ ಭಾಷಣಕಾರನು ತನ್ನ ಚಿಂತನೆಯ ಬಗ್ಗೆ ಮಾತ್ರ ಚಿಂತಿಸುತ್ತಾನೆ ಆದರೆ ಒಬ್ಬ ಮುತ್ಸದಿ ಭಾಷಣಗಾರನು ದೇಶದ ಸಮಾಜದ ಚಿಂತನೆಯನ್ನು ಮಾಡುತ್ತಾನೆ.”
ಬರಹ : (ಬಾಳೆಯಡ ಕಿಶನ್ ಪೂವಯ್ಯ)
ವಕೀಲರು ಮತ್ತು ನೋಟರಿ
9448899554