ಮಡಿಕೇರಿ ಏ.18 : ಕೊಡವ ನ್ಯಾಷನಲ್ ಕೌನ್ಸಿಲ್‌ನ ಬೇಡಿಕೆಯಾಗಿರುವ ಕೊಡವರಿಗೆ ಭೂ ರಾಜಕೀಯ ಸ್ವಾಯತ್ತತೆ ನೀಡಬೇಕು ಹಾಗೂ ಜನಾಂಗಕ್ಕೆ ದೊರಕಬೇಕಾದ ಬುಡಕಟ್ಟು ಸ್ಥಾನಮಾನದ ಬೇಡಿಕೆಯನ್ನು ಪೂರೈಸಲು ಆಯೋಗ ರಚಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯವು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೋಟೀಸ್ ನೀಡಿದೆ.
ಜನಾಂಗದ ಬೇಡಿಕೆಗಳ ಪೂರೈಕೆಗೆ ಆಯೋಗ ರಚಿಸುವಂತೆ ಮಾಜಿ ಕೇಂದ್ರ ಕಾನೂನು ಸಚಿವ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಡಾ.ಸುಬ್ರಮಣ್ಯನ್ ಸ್ವಾಮಿ ಅವರು ಏ.6 ರಂದು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಏ.17 ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಸನ್ನ ಬಿ ವರಾಲೆ ಅವರನ್ನು ಒಳಗೊಂಡ ಪೀಠ, ಅರ್ಜಿಯಲ್ಲಿನ ಮನವಿಯಂತೆ ಸಿ.ಎನ್.ಸಿ ಬೇಡಿಕೆಗಳ ಈಡೇರಿಕೆಗೆ ಆಯೋಗ ರಚಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನೋಟೀಸ್ ಜಾರಿ ಮಾಡಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಡಾ.ಸುಬ್ರಮಣ್ಯನ್ ಸ್ವಾಮಿ ಅವರು ಏ.6 ರಂದು ವಕೀಲ ಸತ್ಯ ಸಬರ್‌ವಾಲ ಅವರ ಮೂಲಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.