ಮಡಿಕೇರಿ ಏ.18 : ರಂಗಭೂಮಿಯಲ್ಲಿ ದಾಖಲೆ ನಿರ್ಮಿಸಿರುವ “ಶಿವದೂತ ಗುಳಿಗ” ಕನ್ನಡ ಪೌರಾಣಿಕ ನಾಟಕವು ಏ.24 ರಂದು ಮಡಿಕೇರಿಯಲ್ಲಿ ಪ್ರದರ್ಶನ ಕಾಣಲಿದೆ ಎಂದು ಜಾನಪದ ಪರಿಷತ್‍ನ ಸಂಚಾಲಕ ವಿಕ್ರಂ ಜಾದೂಗಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಟಕ ಅಕಾಡಮಿ ಪ್ರಶಸ್ತಿ ವಿಜೇತರಾದ ಪ್ರಸಿದ್ಧ ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್ ನಿರ್ದೇಶನದ ಹಾಗೂ ಕಾಂತಾರಾ ಚಲನಚಿತ್ರದ ಗುರುವ ಪಾತ್ರಧಾರಿಯಾಗಿ ಮಿಂಚಿದ ಸ್ವರಾಜ್ ಶೆಟ್ಟಿ, ಮುಖ್ಯ ಅಭಿನಯದ ‘ಶಿವದೂತ ಗುಳಿಗ’ ನಾಟಕವು ಏ.24 ರಂದು ನಗರದ ಗಾಂಧಿ ಮೈದಾನದಲ್ಲಿ ರಾತ್ರಿ 7 ಗಂಟೆಗೆ ಪ್ರದರ್ಶನ ಕಾಣಲಿದೆ ಎಂದು ಮಾಹಿತಿ ನೀಡಿದರು.
ಈಗಾಗಲೇ 50ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದು, 500ರ ಪ್ರದರ್ಶನದ `ದಾಖಲೆಯತ್ತ ಮುನ್ನುಗುತ್ತಿದೆ ಎಂದ ಅವರು, ಪರಿಣಾಮಕಾರಿ ಕಥೆ, ಆತ್ಯದ್ಭುತ ರಂಗ ಸಜ್ಜಿಕೆಯಿಂದ ಕರ್ನಾಟಕದ ಎಲ್ಲೆಡೆ ಹಾಗೂ ವಿದೇಶದಲ್ಲೂ ಕೂಡ ಪ್ರದರ್ಶನ ನೀಡಿರುವ ಅಪರೂಪದ ಅವಕಾಶ ಮಡಿಕೇರಿ ಪ್ರೇಕ್ಷಕರಿಗೆ ಒಲಿದು ಬಂದಿದೆ ಎಂದರು.
30ಕ್ಕೂ ಹೆಚ್ಚು ಕಲಾವಿದರು, ಟನ್ನುಗಟ್ಟಲೆ ಸಾಮಾಗ್ರಿ, ಅತ್ಯಧುನಿಕ ಲೈಟಿಂಗ್ ಹಾಗೂ ಸೌಂಡ್ಸ್, ಸೆಟ್ಟಿಂಗ್ ಈ ನಾಟಕದ ವಿಶೇಷತೆಯಾಗಿದ್ದು, ಸುಮಾರು 2 ಗಂಟೆಗಳ ಕಾಲ ಶಿವದೂತ ಗುಳಿಗ ನಾಟಕ ಪ್ರೇಕ್ಷಕರನ್ನು ರಂಜಿಸಲಿದೆ. ಪಾಸುಗಳ ಮೂಲಕ ನಾಟಕಕ್ಕೆ ಪ್ರವೇಶ ನಿಗದಿಯಾಗಿದ್ದು, ಪ್ರವೇಶದ ಪಾಸುಗಳು ಬೇಕಿದ್ದವರು ಮೊ.9448108222 ಸಂಪರ್ಕಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 2023ರ ಸಾಲಿನ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಕೊಡಗಿನ ಜನಪದ ಕಲೆ, ಕೋಲಾಟ್, ಉಮ್ಮತ್ತಾಟ್‍ನ್ನು ಭಾರತಾದ್ಯಂತ ಪ್ರಚಾರಪಡಿಸಿದ ಹಿರಿಯ ಕಲಾವಿದೆ ರಾಣಿ ಮಾಚಯ್ಯ ಅವರನ್ನು ವೇದಿಕೆ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದೆಂದರು.
ಸುದ್ದಿಗೋಷ್ಠಿಯಲ್ಲಿ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಕಲಾವಿದೆ ಹಾಗೂ ಬರಹಗಾರ್ತಿ ಶೋಭಾ ಸುಬ್ಬಯ್ಯ, ಸಂಚಾಲಕ ರವಿಕಿರಣ್ ಹಾಜರಿದ್ದರು.







